ಪೆಗಾಸಸ್ ವಿವಾದ: ರಾಜ್ಯಸಭೆ ಕಲಾಪ ಪದೇ ಪದೇ ಮುಂದೂಡಿಕೆ
ನವದೆಹಲಿ, ಜುಲೈ 26 ಪೆಗಾಸಸ್ ವಿವಾದಕ್ಕೆ ಸಂಬಂಧಿಸಿ ಪ್ರತಿಪಕ್ಷಗಳು ಗದ್ದಲ, ಕೋಲಾಹಲ ಉಂಟು ಮಾಡಿದ್ದರಿಂದ ರಾಜ್ಯಸಭೆ ಕಲಾಪವನ್ನು ಸೋಮವಾರ ಪದೇ ಪದೇ ಮುಂದೂಡುವಂತಾಯಿತು.
ಬೆಳಿಗ್ಗೆ 11 ಗಂಟೆಗೆ ಸದನ ಸಮಾವೇಶಗೊಳ್ಳುತ್ತಿದ್ದಂತೆ ಸಭಾಪತಿ ಎಂ.ವೆಂಕಯ್ಯ ನಾಯ್ಡು, 1999 ರಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರಯೋಧರಿಗೆ ಗೌರವ ನಮನ ಸಲ್ಲಿಸಿದರು. ಶೌರ್ಯವಂತ ಯೋಧರ ಸ್ಮರಣಾರ್ಥ ಸದಸ್ಯರು ಒಂದು ನಿಮಿಷ ಮೌನ ಆಚರಿಸಿದರು.
ಟೋಕಿಯೊ ಒಲಿಂಪಿಕ್ಸ್‌ನ ಮೊದಲ ದಿನವೇ ಬೆಳ್ಳಿ ಪದಕ ಗೆದ್ದ ಮಿರಾಬಾಯಿ ಚಾನು ಅವರನ್ನು ವೆಂಕಯ್ಯನಾಯ್ಡು ಅಭಿನಂದಿಸಿದರು. ವೇಟ್‌ಲಿಫ್ಟಿಂಗ್‌ನಲ್ಲಿ 21 ವರ್ಷದ ನಂತರ ಭಾರತಕ್ಕೆ ಪದಕ ತಂದುಕೊಟ್ಟ ಮೀರಾಬಾಯಿ ಚಾನು ಸಾಧನೆ ಅತ್ಯದ್ಭುತ ಎಂದು ಸಭಾಪತಿ ಬಣ್ಣಿಸಿದರು.
ಸಾರಿಗೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಕುರಿತು ಸಂಸದೀಯ ಸಮಿತಿಯ ವರದಿಯನ್ನು ಸದಸ್ಯರು ಮಂಡಿಸಿದರು. ಸುಶೀಲ್ ಕುಮಾರ್ ಮೋದಿಗೆ ಮಾತನಾಡಲು ಸಭಾಪತಿ ಅವಕಾಶ ನೀಡುವುದರೊಂದಿಗೆ ಶೂನ್ಯವೇಳೆ ಕಲಾಪ ಆರಂಭವಾಯಿತಾದರೂ, ಗೂಢಚರ್ಯೆ ವಿಚಾರವಾಗಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿ, ಗದ್ದಲ ಉಂಟು ಮಾಡಿದ್ದಾರೆ.
ಗದ್ದಲ ನಡುವೆ, ಪ್ರತಿಪಕ್ಷಗಳ ನಿಲುವಳಿ ಸೂಚನೆಗಳನ್ನು ತಿರಸ್ಕರಿಸಿದ ಪ್ರಧಾನಿ, ಈ ವಿಚಾರಗಳನ್ನು ಈಗಾಗಲೇ ಚರ್ಚಿಸಲಾಗಿದೆ ಎಂದು ಹೇಳಿದರು. ಆದರೂ, ಪ್ರತಿಕ್ಷಗಳ ಸದಸ್ಯರು ಘೋಷಣೆಗಳನ್ನು ಕೂಗಲಾರಂಭಿಸಿದಾಗ ಸಿಟ್ಟಾದ ಸಭಾಪತಿ, ಕೋವಿಡ್ -19, ನಿರುದ್ಯೋಗ, ಆನ್‌ಲೈನ್ ತರಗತಿಗಳಿಂದಾಗಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳು ಸೇರಿದಂತೆ ಅನೇಕ ಪ್ರಮುಖ ವಿಷಯಗಳನ್ನು ಕಲಾಪಕ್ಕೆ ಅಡಚಣೆ ,ಮಾಡುತ್ತಿರುವುದರಿಂದ ಕೈಗೆತ್ತಿಕೊಳ್ಳಲಾಗುತ್ತಿಲ್ಲ ಎಂದರು.
‘ನಾವು ಅಸಹಾಯಕರಾಗಿದ್ದೇವೆ.’ ಎಂದ ಸಭಾಪತಿ ಕಲಾಪವನ್ನು 12 ಗಂಟೆಗೆ ಮುಂದೂಡಿದರು. ಮತ್ತೆ ಸದನ ಸೇರಿದಾಗ ಅದೇ ಪರಿಸ್ಥಿತಿ ನಿರ್ಮಾಣವಾದ್ದರಿಂದ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.