"ಮಾಡು ಇಲ್ಲವೆ ಮಡಿ" ಹಂತದಲ್ಲಿ ಪಂಚಮಸಾಲಿಗಳ ಹೋರಾಟ : ಇಂದು ಸೌಧದ ಎದುರು ಸರಕಾರದ ವಿರುದ್ದ ಶಕ್ತಿ ಪ್ರದರ್ಶನಕ್ಕೆ ಸಜ್ಜು
ಪಾರೇಶ ಭೋಸಲೆ
ಬೆಳಗಾವಿ, ಡಿ, 22 : ಕಳೆದ ಕೆಲವು ತಿಂಗಳುಗಳಿಂದ ತಮಗೆ ಮೀಸಲಾತಿ ನೀಡುವಂತೆ ಸರಕಾರವನ್ನು ಒತ್ತಾಯಿಸುತ್ತ ಕೂಡಲಸಂಗಮದ ಜಯಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ನಡೆಸುತ್ತ ಬಂದಿರುವ ಪಂಚಮಸಾಲಿಗಳ ಹೋರಾಟವು ಕೊನೆಯ ಹಂತದಲ್ಲಿ ಬಂದು ನಿಂತಿದ್ದು, ಈಗಾಗಲೇ ಸರಕಾರಕ್ಕೆ ನೀಡಿದ್ದ ಗಡುವು ಮುಗಿದಿದೆ. ಇನ್ನೇನಿದ್ದರು ಮಾಡು ಇಲ್ಲವೇ ಮಡಿ ಎಂಬ ಹಂತವನ್ನು ತಲುಪಿದ್ದು, ಇಂದು ಸೌಧದ ಎದುರು ಶಕ್ತಿ ಪ್ರದರ್ಶನ ನಡೆಯಲಿದೆ.

ಕಳೆದ ಕೆಲವು ವರ್ಷಗಳಿಂದ ಪಂಚಮಸಾಲಿ ಸಮುದಾಯವು ನಮಗೆ 2ಎ ಮೀಸಲಾತಿ ನೀಡುವಂತೆ ಸರಕಾರಕ್ಕೆ ಒತ್ತಾಯಿಸುತ್ತ ಅನೇಕ ಹೋರಾಟಗಳನ್ನು ಮಾಡುತ್ತ ಬಂದಿದೆ. ಆದರೆ ಸರಕಾರ ಮಾತ್ರ ಇಲ್ಲಿಯ ವರೆಗೆ ಯಾವದೇ ಒಂದು ನಿರ್ಣಯವನ್ನು ತೆಗೆದು ಕೊಳ್ಳದೆ ದೇತೂ ದಿಲಾತೂ ಅನ್ನುತ್ತ ಆಶ್ವಾಸನೆ ಗಳನ್ನು ನೀಡುತ್ತ ಬಂದಿದೆ.
ಆದರೆ ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಶ್ರೀಗಳ ನೇತ್ರತ್ವದಲ್ಲಿ ಪಂಚಮಸಾಲಿ ಸಮುದಾಯವು ಹಲವಾರು ರೀತಿಯ ಸಮಾವೇಶಗಳನ್ನು ಮಾಡುವ ಮೂಲಕ ಸರಕಾರವನ್ನು ಎಚ್ಚರಿಸುತ್ತ ತಮ್ಮ ಹೋರಾಟವನ್ನು ಮುಂದೆ ವರೆಸಿಕೊಂಡು ಬಂದಿದೆ.
ಆದರೆ ಈ ಪಂಚಮಸಾಲಿ ಗಳ ಮೀಸಲಾತಿಗಾಗಿ ಸರಕಾರಕ್ಕೆ ನೀಡಿದ್ದ ಡಿ. 19ರ ಗಡುವು ಮುಗಿದು ಹೋಗಿದೆ.
ಈ ಹಿನ್ನೆಲೆಯಲ್ಲಿ ಕೊನೆಯ ಹಂತದ ಹೋರಾಟಕ್ಕೆ ಇಳಿದಿರುವ ಪಂಚಮಸಾಲಿ ಗಳು ಕಳೆದ ಎರಡು ದಿನಗಳಿಂದ ಜಿಲ್ಲೆಯ ಬೈಲಹೊಂಗಲದಿಂದ ಕೂಡಲಸಂಗಮ ಶ್ರೀಗಳ ಮುಂದಾಳತ್ವದಲ್ಲಿ ಪಾದಯಾತ್ರೆ ಮೂಲಕ ಬೆಳಗಾವಿ ಸುವರ್ಣ ಸೌಧದ ವರೆಗೆ ಆಗಮಿಸಿದ್ದು, ಇಂದು ಸುವರ್ಣ ಸೌಧಕ್ಕೆ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡಿದೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಪಂಚಮಸಾಲಿಗಳಿಗೆ ಸರಕಾರ ಮೀಸಲಾತಿ ಘೋಷಣೆ ಮಾಡುತ್ತಾ ಅಥವಾ ಮತ್ತೆ ಏನಾದರು ನೆಪ ಹೇಳುವ ಮೂಲಕ ಮತ್ತೆ ಜಾರಿಕೊಳ್ಳುತ್ತಾ ಎನ್ನುವದು ಕುತೂಹಲ ಮೂಡಿಸಿದೆ. ಆದರೆ ಪಂಚಮಸಾಲಿಗಳ ಈ ಹೋರಾಟವು ಪಂಚಮಸಾಲಿಗಳಿಗೆ ಮಾಡು ಇಲ್ಲವೆ ಮಡಿ ಎನ್ನುವ ರೀತಿಯಲ್ಲಿದೆ.