ಬಹುಮತ ಕಳೆದುಕೊಂಡ ಪಾಕ್ ಪ್ರಧಾನಿ ಇಮ್ರಾನ್ ಖಾನ್
ಇಸ್ಲಾಮಾಬಾದ್ (ಪಾಕಿಸ್ತಾನ): ಮಾರ್ಚ್ 30: ರಾಜಕೀಯ ಅವ್ಯವಸ್ಥೆಯ ನಡುವೆ, ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಗೆ ಮತ್ತೊಂದು ಆಘಾತ ಎದುರಾಗಿದ್ದು, ಪಿಟಿಐ ನೇತೃತ್ವದ ಸರ್ಕಾರದ ಮಿತ್ರ ಪಕ್ಷವಾದ ಮುತ್ತಹಿದಾ ಕ್ವಾಮಿ ಮೂವ್ಮೆಂಟ್ – ಪಾಕಿಸ್ತಾನ (ಎಂಕ್ಯೂಎಂ-ಪಿ) ಪ್ರತಿಪಕ್ಷಗಳೊಂದಿಗೆ ಕೈಜೋಡಿಸಲು ನಿರ್ಧರಿಸಿದೆ.
ಮುತ್ತಹಿದಾ ಕ್ವಾಮಿ ಮೂವ್ಮೆಂಟ್-ಪಾಕಿಸ್ತಾನ (MQMP) ವಿರೋಧ ಪಕ್ಷಕ್ಕೆ ಬೆಂಬಲ ನೀಡಿದ ಕಾರಣ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಸಂಸತ್ತಿನಲ್ಲಿ ಬಹುಮತ ಕಳೆದುಕೊಂಡಿದೆ.
ವಿರೋಧ ಪಕ್ಷದ ನಾಯಕ ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಅಧ್ಯಕ್ಷ ಬಿಲಾವಲ್ ಭುಟ್ಟೊ ಜರ್ದಾರಿ ಅವರು ಈ ಸುದ್ದಿಯನ್ನು ಟ್ವಿಟರ್ ನಲ್ಲಿ ಪ್ರಕಟಿಸಿದ್ದಾರೆ.
“ಸಂಯುಕ್ತ ವಿರೋಧ ಮತ್ತು ಎಂಕ್ಯೂಎಂ ಒಪ್ಪಂದಕ್ಕೆ ಬಂದಿವೆ, ನಾವು ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳೊಂದಿಗೆ ವಿವರಗಳನ್ನು ಹಂಚಿಕೊಳ್ಳುತ್ತೇವೆ” ಎಂದು ಬಿಲಾವಲ್ ಭುಟ್ಟೊ ಜರ್ದಾರಿ ಹೇಳಿದರು.
ಪ್ರಧಾನಿ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸರ್ಕಾರವು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದೆ ಎಂದು ಆರೋಪಿಸಿ ಮಾರ್ಚ್ 8 ರಂದು ವಿರೋಧ ಪಕ್ಷಗಳು ರಾಷ್ಟ್ರೀಯ ಅಸೆಂಬ್ಲಿ ಸಚಿವಾಲಯದ ಮುಂದೆ ಅವಿಶ್ವಾಸ ನಿರ್ಣಯವನ್ನು ಸಲ್ಲಿಸಿತ್ತು.
342 ಸದಸ್ಯರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಪಿಟಿಐ 155 ಸದಸ್ಯರನ್ನು ಹೊಂದಿದೆ ಮತ್ತು ಅಧಿಕಾರವನ್ನು ಉಳಿಸಿಕೊಳ್ಳಲು ಕನಿಷ್ಠ 172 ಶಾಸಕರ ಅಗತ್ಯವಿದೆ. ಪಿಟಿಐ ನೇತೃತ್ವದ ಒಕ್ಕೂಟವು 179 ಸದಸ್ಯರ ಬೆಂಬಲದೊಂದಿಗೆ ರಚನೆಯಾಯಿತು, ಆದರೆ ಈಗ, ಎಂಕ್ಯೂಎಂ-ಪಿ ಪಕ್ಷವನ್ನು ತೊರೆದ ನಂತರ, ಪಿಟಿಐ 164 ಸದಸ್ಯರ ಹೊಂದಿದೆ.