ವಿಶಾಖಪಟ್ಟಣದಲ್ಲಿ ಮೊದಲ ಫ್ಲೀಟ್ ಸಪೋರ್ಟ್ ಶಿಪ್ ಲೋಕಾರ್ಪಣೆಗೊಳಿಸಲಿರುವ ರಾಜನಾಥ್ ಸಿಂಗ್
ನವದೆಹಲಿ, ಅ. 5 : ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ ವಿಶಾಖಪಟ್ಟಣದ ಹಿಂದೂಸ್ತಾನ್ ಶಿಪ್‌ಯಾರ್ಡ್ ಲಿಮಿಟೆಡ್ (ಎಚ್‌ಎಸ್‌ಎಲ್)ನಲ್ಲಿ ಭಾರತೀಯ ನೌಕಾಪಡೆಯ ಮೊದಲ ಫ್ಲೀಟ್ ಸಪೋರ್ಟ್ ಶಿಪ್ (ಎಫ್‌ಎಸ್‌ಎಸ್-1) ಅನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಇದೇ ವೇಳೆ ಸರಣಿಯ ಐದನೇ ಹಡಗಿನ ಕೀಲ್ ಅಳವಡಿಕೆ ಹಾಗೂ ನವೀಕರಿಸಲಾದ ಸ್ಲಿಪ್‌ವೇ ಮತ್ತು 300 ಟನ್ ಸಾಮರ್ಥ್ಯದ ಗೋಲಿಯಾತ್ ಕ್ರೇನ್‌ನ್ನು ಉದ್ಘಾಟಿಸಲಿದ್ದಾರೆ.
ಈ ಕಾರ್ಯಕ್ರಮಗಳು ದೇಶೀಯ ಹಡಗು ನಿರ್ಮಾಣ ಸಾಮರ್ಥ್ಯವನ್ನು ಬಲಪಡಿಸುವ ಹಾಗೂ ಬೃಹತ್ ನೌಕಾ ವೇದಿಕೆಗಳ ನಿರ್ಮಾಣಕ್ಕೆ ಅಗತ್ಯವಿರುವ ಮೂಲಸೌಕರ್ಯವನ್ನು ವಿಸ್ತರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಲಿವೆ.
ವಿಸ್ತರಿತ ಉದ್ದ ಮತ್ತು ಹೆಚ್ಚುವರಿ ಭಾರ ಹೊರುವ ಸಾಮರ್ಥ್ಯ ಹೊಂದಿರುವ ನವೀಕರಿಸಿದ ಸ್ಲಿಪ್‌ವೇ-4 ಹಾಗೂ 300 ಟನ್ ಸಾಮರ್ಥ್ಯದ ಗೋಲಿಯಾತ್ ಕ್ರೇನ್ ಮೂಲಕ ಎಚ್‌ಎಸ್‌ಎಲ್ ಗರಿಷ್ಠ 45,000 ಡೆಡ್‌ವೇಟ್ ಟನ್‌ಗಳ (ಡಿಡಬ್ಲ್ಯೂಟಿ) ಹಡಗುಗಳನ್ನು ನಿರ್ಮಿಸಿ ನೀರಿಗೆ ಇಳಿಸಲು ಸಾಧ್ಯವಾಗಲಿದೆ. ಇದರಿಂದ ದೊಡ್ಡ ಹಾಗೂ ಹೆಚ್ಚು ಸಂಕೀರ್ಣ ಹಡಗುಗಳ ನಿರ್ಮಾಣ ಕೈಗೊಳ್ಳುವ ಶಿಪ್‌ಯಾರ್ಡ್‌ನ ಸಾಮರ್ಥ್ಯ ಮತ್ತಷ್ಟು ಹೆಚ್ಚಲಿದೆ.
ಎಫ್‌ಎಸ್‌ಎಸ್-1 ಭಾರತೀಯ ನೌಕಾಪಡೆಗಾಗಿ ನಿರ್ಮಿಸಲಾಗುತ್ತಿರುವ ಐದು ಫ್ಲೀಟ್ ಸಪೋರ್ಟ್ ಶಿಪ್‌ಗಳ ಪೈಕಿ ಮೊದಲನೆಯದು. ಸುಮಾರು 43,500 ಟನ್ ತೂಕದ ಈ ಹಡಗುಗಳು ಸಮುದ್ರದಲ್ಲಿರುವ ನೌಕಾಪಡೆಯ ಯುದ್ಧನೌಕೆಗಳಿಗೆ ಮರುಪೂರೈಕೆ ನೆರವು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಇದರಿಂದ ಅಗತ್ಯ ಸರಬರಾಜಿಗಾಗಿ ಬಂದರಿಗೆ ಮರಳದೇ ಯುದ್ಧನೌಕೆಗಳು ದೀರ್ಘಕಾಲ ಸಮುದ್ರದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ.
ಉಕ್ಕಿನ ಕತ್ತರಿಸುವ ಕಾಮಗಾರಿ ಆರಂಭವಾದ ಕೇವಲ 18 ತಿಂಗಳಲ್ಲೇ ಎಫ್‌ಎಸ್‌ಎಸ್-1 ಲೋಕಾರ್ಪಣೆಯಾಗುತ್ತಿರುವುದು ಯೋಜನೆಯಡಿ ನಡೆಯುತ್ತಿರುವ ನಿರ್ಮಾಣ ಕಾರ್ಯದ ವೇಗವನ್ನು ತೋರಿಸುತ್ತದೆ. ಈ ಹಡಗುಗಳು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತೀಯ ನೌಕಾಪಡೆಯ ಕಾರ್ಯಾಚರಣಾ ಸಾಮರ್ಥ್ಯ, ಸಹನಶಕ್ತಿ ಮತ್ತು ವ್ಯಾಪ್ತಿಯನ್ನು ಹೆಚ್ಚಿಸುವ ನಿರೀಕ್ಷೆಯಿದೆ.
ಎಫ್‌ಎಸ್‌ಎಸ್-5ರ ಕೀಲ್ ಅಳವಡಿಕೆ ಕಾರ್ಯಕ್ರಮವು ಯೋಜನೆಯ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದ್ದು, ಫ್ಲೀಟ್ ಸಪೋರ್ಟ್ ಶಿಪ್‌ಗಳ ಸರಣಿ ನಿರ್ಮಾಣದತ್ತ ಕಾರ್ಯಕ್ರಮ ಮುನ್ನಡೆಯುತ್ತಿರುವುದನ್ನು ಸೂಚಿಸಲಿದೆ.
ದೇಶೀಯವಾಗಿ ಫ್ಲೀಟ್ ಸಪೋರ್ಟ್ ಶಿಪ್‌ಗಳ ನಿರ್ಮಾಣವು ನೌಕಾಪಡೆಗೆ ವಿಶೇಷ ಮಹತ್ವದ್ದಾಗಿದೆ. ಇಂತಹ ಹಡಗುಗಳು ದೀರ್ಘಕಾಲದ ಸಮುದ್ರ ಕಾರ್ಯಾಚರಣೆಗಳನ್ನು ನಿರಂತರವಾಗಿ ನಡೆಸಲು ಅಗತ್ಯವಾದ ಇಂಧನ, ನೀರು, ಮದ್ದುಗುಂಡುಗಳು, ಆಹಾರ ಮತ್ತು ಇತರ ಅಗತ್ಯ ಸಾಮಗ್ರಿಗಳನ್ನು ನಿಯೋಜಿತ ಯುದ್ಧನೌಕೆಗಳಿಗೆ ಪೂರೈಸಬಲ್ಲವು. ಇದರಿಂದ ಯುದ್ಧನೌಕೆಗಳು ತಮ್ಮ ತವರು ಬಂದರುಗಳಿಂದ ಹೆಚ್ಚಿನ ದೂರದಲ್ಲಿಯೂ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್, ರಕ್ಷಣಾ ಉತ್ಪಾದನಾ ಕಾರ್ಯದರ್ಶಿ ಸಂಜೀವ್ ಕುಮಾರ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಎಫ್‌ಎಸ್‌ಎಸ್-1ರ ಲೋಕಾರ್ಪಣೆ ಮತ್ತು ಎಚ್‌ಎಸ್‌ಎಲ್‌ನ ನವೀಕರಿಸಿದ ಮೂಲಸೌಕರ್ಯ ಉದ್ಘಾಟನೆಯು ದೇಶೀಯ ಹಡಗು ನಿರ್ಮಾಣ ಸಾಮರ್ಥ್ಯವನ್ನು ಬಲಪಡಿಸುವ ಹಾಗೂ ಬೃಹತ್ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಹಡಗುಗಳನ್ನು ನಿರ್ಮಿಸುವ ಭಾರತೀಯ ಶಿಪ್‌ಯಾರ್ಡ್‌ಗಳ ಸಾಮರ್ಥ್ಯವನ್ನು ಹೆಚ್ಚಿಸುವ ಸರ್ಕಾರದ ಬದ್ಧತೆಯನ್ನು ಮತ್ತೊಮ್ಮೆ ಒತ್ತಿಹೇಳಲಿದೆ.