ಕೋವಿಡ್ 19 : ಪೋಲಿಷ್ ಅಧ್ಯಕ್ಷರಿಗೆ ಸೋಂಕು ದೃಢ
ವಾರ್ಸಾ, ಅ 24 (ಯುಎನ್‍ಐ) ಪೋಲಿಷ್ ಅಧ್ಯಕ್ಷ ಆಂಡ್ರೆಜ್ ದುಡಾ ಅವರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. "ಅಧ್ಯಕ್ಷ ಆಂಡ್ರೆಜ್ ದುಡಾ ಅವರನ್ನು ಶುಕ್ರವಾರ ಸೋಂಕು ಪರೀಕ್ಷೆಗೆ ಒಳಪಡಿಸಲಾಯಿತು. ಸೋಂಕು ಧನಾತ್ಮಕವಾಗಿದೆ. ಅಧ್ಯಕ್ಷರ ಆರೋಗ್ಯ ಸ್ಥಿರವಾಗಿದೆ. ಸೂಕ್ತ ವೈದ್ಯಕೀಯ ಸೇವೆಗಳೊಂದಿಗೆ ನಾವು ನಿರಂತರ ಸಂಪರ್ಕದಲ್ಲಿದ್ದೇವೆ" ಎಂದು ಅವರ ವಕ್ತಾರ ಬ್ಲಜೆಜ್ ಸ್ಪೈಚಲ್ಸ್ಕಿ ಟ್ವೀಟ್ ಮಾಡಿದ್ದಾರೆ.
ಅಧ್ಯಕ್ಷರು ಇತ್ತೀಚಿಗೆ ಭೇಟಿ ಮಾಡಿದವರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ದುಡಾ ಮುಖ್ಯ ಸಹಾಯಕ ಕ್ರೈಜ್ಜ್ಟೋಫಸ್ ಜೆರ್ಸ್ಕಿ ಶನಿವಾರ ಹೇಳಿದ್ದಾರೆ. ಶುಕ್ರವಾರ ದುಡಾ ಅವರು ವಾರ್ಸಾದ ರಾಷ್ಟ್ರೀಯ ಕ್ರೀಡಾಂಗಣಕ್ಕೆ ಭೇಟಿ ನೀಡಿದ್ದರು. ಇದನ್ನು ಇತ್ತೀಚೆಗಷ್ಟೆ 500 ಹಾಸಿಗೆಗಳ ತಾತ್ಕಾಲಿಕ ಕೋವಿಡ್ -19 ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿತ್ತು.
ಶುಕ್ರವಾರ ಪೋಲಿಷ್ ಆರೋಗ್ಯ ಸಚಿವಾಲಯವು 13,632 ದಾಖಲೆ ಸಂಖ್ಯೆಯ ಕೊರೋನಾ ಸೋಂಕುಗಳನ್ನು ವರದಿ ಮಾಡಿದೆ. ಇದರಲ್ಲಿ 153 ಸಾವುಗಳು ಸಂಭವಿಸಿವೆ. ಇಲ್ಲಿಯವರೆಗೆ, ಪೋಲೆಂಡ್ ಒಟ್ಟು 228,318 ಸೋಂಕು ಪ್ರಕರಣ ಹೊಂದಿದ್ದು, 4,172 ಸೋಂಕಿತರು ಮೃತಪಟ್ಟಿದ್ದಾರೆ.