ಕೈಯಿಂದ ಗಣಿಗಾರಿಕೆ ಮಾಡುವ ಭೋವಿ ವಡ್ಡರಿಗೆ ಅವಕಾಶ: ಹಾಲಪ್ಪ ಆಚಾರ್
ಲೋಕದರ್ಶನ ವರದಿ
ಗಂಗಾವತಿ 14: ತಾಲೂಕಿನ ಸಂಗಾಪುರ ಗ್ರಾಮದ ಸರ್ವೆ. ನಂ. 2 ರಲ್ಲಿ ಭೋವಿ ವಡ್ಡರಿಗೆ ಗಣಿಗಾರಿಕೆ ಮಾಡಲು ಅವಕಾಶ ನೀಡಲಾಗುವದು ಎಂದು ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವ ಹಾಲಪ್ಪ ಆಚಾರ್ ತಿಳಿಸಿದರು. ಸಚಿವರಾಗಿ ಅಧಿಕಾರವಹಿಸಿಕೊಂಡಿದ್ದ ಅವರು ಪ್ರಥಮಬಾರಿಗೆ ಶನಿವಾರ ಗಂಗಾವತಿಗೆ ಭೇಟಿ ನೀಡಿ ಶಾಸಕ ಪರಣ್ಣ ಮುನವಳ್ಳಿ ನಿವಾಸದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.
ಸರಕಾರ ಅಕ್ರಮ ಕಲ್ಲು ಗಣಿಗಾರಿಕೆಯನ್ನು ನಿಷೇಧಿಸಿದೆ. ಈ ತಾಲೂಕಿನಲ್ಲಿ ಭೋವಿ ವಡ್ಡರ ಸಂಖ್ಯೆ ಹೆಚ್ಚಿದೆ. ಕೈಯಿಂದ ಕಲ್ಲು ಗಣಿಗಾರಿಕೆ ಮಾಡುವದು ಅವರ ಕುಲ ಕಸುಬಾಗಿದೆ. ಆದರೆ ಗಣಿಗಾರಿಕೆ ಮಾಡದಂತೆ ನಿರ್ಬಂಧ ವಿಧಿಸಲಾಗಿತ್ತು. ಮಾನವೀಯತೆ ದೃಷ್ಟಿಯಿಂದ ಕೈಯಿಂದ ಭೋವಿ ವಡ್ಡರಿಗೆ ಕಲ್ಲು ಗಣಿಗಾರಿಕೆ ಮಾಡಲು ಅವಕಾಶ ಕಲ್ಪಿಸಲಾಗುವದು ಎಂದು ತಿಳಿಸಿದರು. ಗಣಿಗಾರಿಕೆ ಸಂದರ್ಭದಲ್ಲಿ ಸ್ಪೋಟಕಗಳನ್ನು ಬಳಸಿದರೆ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದರು.
ಮರಳು ಕುರಿತು ಮಾತನಾಡಿದ ಸಚಿವರು ಉತ್ಪಾದನೆಗಿಂತ ಬೇಡಿಕೆ ಹೆಚ್ಚಾಗಿದೆ. ಅಕ್ರಮ ಮರಳು ಗಣಿಗಾರಿಕೆಯನ್ನು ಸರಕಾರ ನಿಷೇಧಿಸಿದೆ. ಜನರಿಗೆ ಮುಂದಿನ ದಿನಗಳಲ್ಲಿ ಸುಲಭವಾಗಿ ಮರಳು ದೊರಕಬೇಕು ಎಂಬ ಉದ್ದೇಶದಿಂದ ನೂತನ ಮರಳು ನೀತಿಯನ್ನು ಜಾರಿಗೆ ತರಲಾಗುವದು ಎಂದು ಹೇಳಿದರು.
ಕೋವಿಡ್-19 ಕೊಪ್ಪಳ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ. ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಉತ್ಪಾದಕ ಘಟಕ ಈಗಾಗಲೇ ಕಾರ್ಯ ಆರಂಭಿಸಿದೆ. 15 ದಿನಗಳೊಳಗೆ ಗಂಗಾವತಿ, ಕುಷ್ಟಗಿ ಮತ್ತು ಯಲಬುರ್ಗಾಗಳಲ್ಲಿ ಆಕ್ಸಿಜನ್ ಉತ್ಪಾದಕ ಘಟಕ ಆರಂಭಗೊಳ್ಳಲಿವೆ ಎಂದು ಆಚಾರ್ ತಿಳಿಸಿದರು. ಸಚಿವನಾಗಿ ಅಧಿಕಾರ ವಹಿಸಿಕೊಂಡ ತಕ್ಷಣ ಪ್ರಥಮಬಾರಿಗೆ ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಕೋವಿಡ್-19 ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಕರೊನಾ ಪ್ರಥಮ ಮತ್ತು ದ್ವಿತೀಯ ಅಲೆಗಳು ನಮಗೆ ಸಾಕಷ್ಟು ಪಾಠ ಕಲಿಸಿವೆ. 3ನೇ ಅಲೆ ಎದುರಿಸಲು ಜಿಲ್ಲಾ ಆಡಳಿತ ಸಮರ್ಥವಾಗಿದೆ. ತಜ್ಞರ ವರದಿ ಪ್ರಕಾರ 3ನೇ ಅಲೆ ಮಕ್ಕಳಿಗೆ ಹರಡುವ ಲಕ್ಷಣಗಳಿವೆ. ಮಕ್ಕಳಿಗಾಗಿ ಪ್ರತ್ಯೇಕ ವಾರ್ಡ, ವೆಂಟಿಲೇಟರ್ ಸೌಲಭ್ಯ ವ್ಯವಸ್ಥೆ ಮಾಡಲು ಜಿಲ್ಲಾ ಆಡಳಿತಕ್ಕೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು. ಕರೊನಾ 3ನೇ ಅಲೆಯನ್ನು ನಿರ್ಮೂಲನೆ ಮಾಡಲು ಸರಕಾರ ಸಮರ್ಥವಾಗಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ಕನಕಗಿರಿ ಶಾಸಕ ಬಸವರಾಜ ದಢೇಸೂಗೂರು, ಸಂಸದ ಕರಡಿ ಸಂಗಣ್ಣ, ಶಾಸಕ ಪರಣ್ಣ ಮುನವಳ್ಳಿ ಮತ್ತು ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಪಾಲ್ಗೊಂಡಿದ್ದರು.