ಸೇವೆ ಮಾಡಲು ರಾಜಕೀಯ ರಂಗದ ಅವಶ್ಯಕತೆ ಇಲ್ಲ: ಮಾಜಿ ಸೈನಿಕನ ಕಳಕಳಿ
ಮಹಾಲಿಂಗಪುರ 25: ಸೇವೆ ಮಾಡಲು ಸೇವಾ ಮನೋಭಾವನೆ ಇದ್ದರೆ ಸಾಕು, ರಾಜಕೀಯ ರಂಗದ ಅವಶ್ಯಕತೆ ಇಲ್ಲ ಎನ್ನುವುದನ್ನು ಮಾಜಿ ಸೈನಿಕರೊಬ್ಬರು ತಮ್ಮ ದುಡಿಮೆಯ ಆದಾಯದಿಂದಲೇ ಸಾಕಷ್ಟು ಜನಪರ ಕೆಲಸ ಮಾಡುವ ಮೂಲಕ ತೋರಿಸಿ ಕೊಟ್ಟಿದ್ದಾರೆ.
ಇದೀಗ ಸಮೀಪದ ಹಳೇ ಯರಗುದ್ರಿ ಗ್ರಾಮದ ಮಾಜಿ ಸೈನಿಕ ಹಾಗೂ ಉದ್ಯಮಿ ಶ್ರೀಶೈಲ ಭಜಂತ್ರಿ ಅವರಾದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅವರಾದಿ, ಗುಲಗಂಜಿಕೊಪ್ಪ, ಯರಗುದ್ರಿ ಸೇರಿದಂತೆ ಎಲ್ಲ ಗ್ರಾಮಗಳು ಹಾಗೂ 10 ಕಿಮೀ ವ್ಯಾಪ್ತಿಯ ಮಹಾಲಿಂಗಪುರ, ರನ್ನಬೆಳಗಲಿ, ಯಾದವಾಡ ಪಟ್ಟಣಗಳಿಗೂ ತೆರಳಿ ಅಂದಾಜು 20,000 ಮಾಸ್ಕ್ ಮತ್ತು ಸ್ಯಾನಿಟೈಸರ್ ಗಳನ್ನು ವಿತರಿಸಿ ಸಂಘ-ಸಂಸ್ಥೆಗಳು ಹಾಗೂ ರಾಜಕೀಯ ನೇತಾರರನ್ನು ಮೀರಿಸಿದ್ದಾರೆ.
ಕೊರೊನಾ ಲಾಕ್ಡೌನ್ ಸಮಯದಲ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬಡವ, ಶ್ರೀಮಂತ ಭೇದವಿಲ್ಲದೆ ಸರ್ವರಿಗೂ ಸಹಾಯ ಮಾಡುತ್ತಿರುವ ಮಾಜಿ ಸೈನಿಕನ ಸೇವೆ ಮಾದರಿಯಾಗಿದೆ.
ಈ ವಿತರಣಾ ಕಾರ್ಯದಲ್ಲಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಎಂ. ಎಸ್. ಅರವಳ್ಳಿ, ಆಶಾ ಕಾರ್ಯಕರ್ತೆ ಎಸ್. ಎಂ. ನದಾಫ, ಯುವ ಮುಖಂಡರಾದ ಪ್ರಕಾಶ್ ಕಾಳಶೆಟ್ಟಿ, ಮುದುಕಪ್ಪ ದಳವಾಯಿ, ತಿಪ್ಪಣ್ಣ ತೋರಗಲ್ಲ, ವಿಠ್ಠಲ ತೋರಗಲ್ಲ, ಹಸನಸಾಬ ನದಾಫ, ಮಹಾಲಿಂಗ ಹರಿಜನ ಇದ್ದರು.