ಭಾರತಕ್ಕೆ "ಚಿನ್ನ" ತಂದು ಕೊಟ್ಟ ನೀರಜ್ ಚೋಪ್ರಾ
ಟೋಕಿಯೊ, ಆಗಸ್ಟ್ 7 ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಅಥ್ಲೀಟ್ ನೀರಜ್ ಚೋಪ್ರಾ ಅದ್ಭುತ ಸಾಧನೆ ಮಾಡಿದ್ದಾರೆ. ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಅತ್ಯುತ್ತಮ ಪ್ರದರ್ಶನದ ಮೂಲಕ ನೀರಜ್ ಚೋಪ್ರಾ ಚಿನ್ನದ ಪದಕ ಕೊರಳೇರಿಸಿಕೊಂಡಿದ್ದಾರೆ.
ಮೊದಲ ಸುತ್ತಿನಲ್ಲಿ 87.03 ಮೀಟರ್ ಎಸೆಯುವ ಮೂಲಕ ಅಗ್ರ ಸ್ಥಾನದಲ್ಲಿದ್ದ ನೀರಜ್ ಎರಡನೇ ಸುತ್ತಿನಲ್ಲೂ ಪ್ರಾಬಲ್ಯ ಮೆರೆದರು. ಈ ಬಾರಿ ಅವರು 87.58 ಮೀಟರ್ ಎಸೆದು ಹಂಗಾಮಿನ ಅತ್ಯುತ್ತಮ ದಾಖಲೆ ನಿರ್ಮಿಸಿದರು. ನಂತರ ಅವರು ಮೂರನೇ ಸುತ್ತಿನಲ್ಲಿ 76. 79 ಮೀ ದೂರ ಎಸೆದರು. ಮೊದಲ ಎರಡು ಸುತ್ತುಗಳಲ್ಲಿ ಸ್ಪಷ್ಟ ಮುನ್ನಡೆಯೊಂದಿಗೆ ಮೊದಲ ಸ್ಥಾನದಲ್ಲಿದ್ದರು. ನಾಲ್ಕನೇ ಮತ್ತು ಐದನೇ ಸುತ್ತಿನಲ್ಲಿ ಎಸೆಯಲು ವಿಫಲರಾದರು. ಅಂತಿಮವಾಗಿ ಆರನೇ ಸುತ್ತಿನಲ್ಲಿ 84.24 ರೊಂದಿಗೆ ಮುಕ್ತಾಯಗೊಳಿಸಿದರು. ಒಟ್ಟಾರೆ 87.58 ಹಂಗಾಮಿನ ಅತ್ಯುತ್ತಮ ಪ್ರದರ್ಶನದೊಂದಿಗೆ ಅವರು ಚಿನ್ನ ಗೆದ್ದಿದ್ದಾರೆ. ಇನ್ನೂ ಭಾರತಕ್ಕೆ ವೈಯಕ್ತಿಕ ವಿಭಾಗದಲ್ಲಿ ಭಾರತಕ್ಕೆ ಚಿನ್ನ ತಂದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. 2008 ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಅಭಿನವ್ ಬಿಂದ್ರಾ ಶೂಟಿಂಗ್ ವಿಭಾಗದಲ್ಲಿ ಭಾರತಕ್ಕೆ ಮೊದಲ ಚಿನ್ನ ಗೆದ್ದುಕೊಟ್ಟಿದ್ದರು.
ಹರಿಯಾಣದ ನೀರಜ್ ಚೋಪ್ರಾ ಡಿಸೆಂಬರ್ 24, 1997 ರಂದು ಪಾಣಿಪತ್ ಜಿಲ್ಲೆಯ ಕಂದರಾ ಗ್ರಾಮದಲ್ಲಿ ಜನಿಸಿದರು. ಚಂಡೀಗಢ ಡಿಎವಿ ಕಾಲೇಜಿನಲ್ಲಿ ಶಿಕ್ಷಣ ಪಡೆದ ನೀರಜ್ ಚಿಕ್ಕ ವಯಸ್ಸಿನಲ್ಲೇ ಭಾರತೀಯ ಸೇನೆಗೆ ಆಯ್ಕೆಗೊಂಡಿದ್ದರು. ಪ್ರಸ್ತುತ ಅವರು ಭಾರತೀಯ ಸೇನೆಯಲ್ಲಿ ನಾಯಕ್ ಸುಬೇದಾರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 2018 ರ ಏಷ್ಯನ್ ಗೇಮ್ಸ್ ನಲ್ಲಿ ಜಾವೆಲಿನ್ ಥ್ರೋ ಫೈನಲ್ ನಲ್ಲಿ 88.06 ಮೀಟರ್ ಎಸೆದು ಇತಿಹಾಸ ನಿರ್ಮಿಸಿದ ನೀರಜ್, ಚಿನ್ನ ಗೆಲ್ಲುವ ಮೂಲಕ ಹೊರಹೊಮ್ಮಿದ್ದರು. ಇನ್ನೂ 88.06 ಮೀಟರ್ ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಅ ನಂತರ, 2018 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿಯೂ ಸಹ ನೀರಜ್ ಚೋಪ್ರಾ 86.47 ಮೀಟರ್ ಎಸೆದು ಮತ್ತೊಮ್ಮೆ ಚಿನ್ನ ಗೆದ್ದಿದ್ದರು.