ಮಹಲಿಂಗಪುರ

ಮುಸ್ಲಿಂರು ಭಗವದ್ಗೀತೆ ಹಿಂದೂಗಳು ಕುರಾನ್ ಓದಿ ಭಾವ್ಯಕ್ಯತೆ ಮೆರೆಯಬೇಕಿದೆ

ಮುಸ್ಲಿಂರು ಭಗವದ್ಗೀತೆ ಹಿಂದೂಗಳು ಕುರಾನ್ ಓದಿ ಭಾವ್ಯಕ್ಯತೆ ಮೆರೆಯಬೇಕಿದೆ

ಭಾವೈಕ್ಯಶ್ರೀ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಹೈದ್ರಾಬಾದ್‌ನ ಸೂಫಿ ಮೌಲಾನಾ ಸೈಯದ್‌ಬಾಷಾ ಕರೆ 

ಮಹಾಲಿಂಗಪುರ 07: ಕನ್ನಡದ ಕಬೀರ, ಸೂಫಿ ಸಂತ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ದಿ.ಇಬ್ರಾಹಿಂ ಸುತಾರ ಅವರ ದ್ವಿತೀಯ ಪುಣ್ಯಸ್ಮರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಭಾವೈಕ್ಯ ದಿನೋತ್ಸವ ಮತ್ತು ಭಾವೈಕ್ಯಶ್ರೀ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಭಾರತೀಯ ಸಂವಿಧಾನ ಮತ್ತು ಸರ್ವ ಧರ್ಮಗ್ರಂಥಗಳಿಗೆ ಪುಷ​‍್ಾರೆ್ಪಣ ಮಾಡುವ ಮೂಲಕ ವಿಶೇಷವಾಗಿ ಉದ್ಘಾಟಿಸಲಾಯಿತು. 

ಸ್ಥಳೀಯ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಸೋಮವಾರ ಸಂಜೆ ಜರುಗಿದ ಕಾರ್ಯಕ್ರಮದಲ್ಲಿ ರಂಗಭೂಮಿ ಕಲಾವಿದ, ಗಾಯಕ, ನಿರ್ದೇಶಕ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಆಕಾಶವಾಣಿ ಕಲಾವಿದ ಮೆಹಬೂಬ್ ಸನದಿಯವರಿಗೆ 2023-24 ನೇ ಸಾಲಿನ ಭಾವೈಕ್ಯಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. 

ಭಾವೈಕ್ಯ ವಿಶ್ವಶಾಂತಿ ಕನ್ನಡ ಪ್ರವಚನಕಾರ, ಹೈದ್ರಾಬಾದ್‌ನ ಸೂಫಿ ಮೌಲಾನಾ ಸೈಯದ್‌ಬಾಷಾ ಮಾತನಾಡಿ, ಭಾಷೆ ಬೇರೆಯಾದರೂ ಎಲ್ಲಾ ಧರ್ಮಗಳ ಸಾರವೂ ಒಂದೇ ಆಗಿರುತ್ತದೆ. ಜಗಜ್ಯೋತಿ ಬಸವಣ್ಣನವರು ಏಕ ಪಂಕ್ತಿಯಲ್ಲಿ 101 ಸಮಾಜಗಳಿಗೆ ಪ್ರಸಾದ ನೀಡಿ ಭಾವೈಕ್ಯತೆ ಮೆರೆದರು. ಕೂಡಿದ್ದ ಮನೆ ಕೂಡಲಸಂಗಮ, ಕೂಡಿದ್ದ ದೇಶ ಸ್ವರ್ಗ ಸಮಾನ, ಕಣ್ಣು ಎರಡಾದರೂ ನೋಟ ಒಂದೇ, ಕಾಲು ಎರಡಾದರೂ ನಡಿಗೆ ಒಂದೇ ಎಂಬಂತೆ ಭೇದ ಮರೆತು ಒಂದಾಗಬೇಕು, ಆ ನಿಟ್ಟಿನಲ್ಲಿ ಮುಸಲ್ಮಾನರು ಭಗವದ್ಗೀತೆ ಮತ್ತು ಬಸವಣ್ಣನವರ ವಚನಗಳನ್ನು ಓದಬೇಕು, ಹಿಂದೂಗಳು ಕುರಾನ್ ಓದಿ ಭಾವ್ಯಕ್ಯತೆ ಮೆರೆಯಬೇಕಾಗಿದೆ ಎಂದರು.ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದ ಸಹಜಾನಂದ ಶ್ರೀ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿ, ಮರೆಯಾದ ನಂತರವೂ ಸುತಾರರ ಭಾವೈಕ್ಯತೆಯ ಧರ್ಮ ಮೆರೆಯುತ್ತಿದೆ. ಸುತಾರರ ತಾಯಿ ಸುತಾರರನ್ನು ಮಸೀದಿ ಮತ್ತು ಮಂದಿರಗಳಿಗೆ ಸಮಾನವಾಗಿ ಕಳಿಸಿಕೊಟ್ಟು ಜೀವನದಲ್ಲಿ ಧರ್ಮ, ಸತ್ಕಾರ್ಯ, ಸತ್ಸಂಗದಲ್ಲಿ ನಡೆಯಲು ಪ್ರೇರೇಪಿಸಿ ಮಹಾಲಿಂಗಪುರದ ಕೀರ್ತಿ ದೇಶಾದ್ಯಂತ ಪಸರಿಸುವಂತೆ ಮಾಡಿದರು ಎಂದರು. 

ಉಪ್ಪಿನ ಬೆಟಗೇರಿಯ ಸೂಫಿ ಸಂತ ಶಿರಾಜುಲ್ ಅಕ್ಷಾಕಾದ್ರಿ ಮಾತನಾಡಿ, ಧಾರ್ಮಿಕ ಬೀಜ ಹುಟ್ಟಿದ ಊರು ಮಹಾಲಿಂಗಪುರ, ಮಾನವೀಯ ಮೌಲ್ಯಗಳನ್ನು ಬೆಳೆಸುವ ಕಾಯಕವೇ ಧರ್ಮ.ಧರ್ಮಕ್ಕೆ ಅಧೀನವಾದರೆ ಮಾತ್ರ ಮುಕ್ತಿ, ಭೇದ ಭಾವ ಮಾಡುವವ ಧರ್ಮಗುರುವಾಗಲಾರ, ವೇದ ಉಪನಿಷತ್ತುಗಳು ಮಾನವೀಯ ಮೌಲ್ಯ ಬೆಳೆಸುತ್ತವೆ ಎಂದರು. 

ಕೊಣ್ಣೂರಿನ ಆಧ್ಯತ್ಮಿಕ ಚಿಂತಕ ಡಾ.ಬಸವರಾಜ ಕೊಣ್ಣೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾದರವಳ್ಳಿಯ ಮೌಲಾನಾ ತನ್ವೀರ್‌ಸಾಬ್ ಮುಜಾವರ ಮಾತಣಾಡಿ ಇಬ್ರಾಹಿಂ ಸುತಾರ ನುಡಿದಂತೆ ನಡೆದು, ಏನೂ ಗಳಿಸದೇ ಸಹಬಾಳ್ವೆ ಭಾವೈಕ್ಯತೆಯಿಂದ ಭಾಳಿದವರು ಎಂದರು.ಯಾದವಾಡದ ಕಲ್ಲಪ್ಪ ಪಾವಟೆ ಮಾತನಾಡಿ, ಇಳಕಲ್ ಗ್ರಾನೈಟ್‌ನಿಂದ ಇಬ್ರಾಹಿಂ ಸುತಾರ ಅವರ ದರ್ಗಾ ನಿರ್ಮಿಸುವ ಭರವಸೆ ನೀಡಿದರು. ಬಸವಾನಂದ ಬ್ರಹ್ಮ ವಿದ್ಯಾಶ್ರಮ ಟ್ರಸ್ಟಿನ ಉಪಾಧ್ಯಕ್ಷ ಬಿ.ಎಂ.ಢಪಳಾಪುರ ಅಧ್ಯಕ್ಷತೆ ವಹಿಸಿ, ಮಲ್ಲಪ್ಪ ಕಟಗಿ, ಗದಗಿನ ಸೂಫಿ ಮಹ್ಮದ್ ಅಲಿ, ಮಾತೋಶ್ರೀ ಕಮಲವ್ವ ಪೂಜಾರಿ, ನಬಿಸಾಬ್ ಮುಲ್ಲಾ ಇತರರಿದ್ದರು. 

ಇಬ್ರಾಹಿ ಸುತಾರರ ಪುತ್ರ ಹುಮಾಯೂನ್ ಸುತಾರ ಸ್ವಾಗತಿಸಿ, ಶಿಕ್ಷಕ ಎಂ.ಆರ್‌.ಬಿದರಿ ನಿರೂಪಿಸಿ, ಶಿಕ್ಷಕ ಎಸ್‌.ಕೆ.ಗಿಂಡೆ ಸಿದ್ಧಾರೂಢರ ಮಂಗಲದೊಂದಿಗೆ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು. 


ಸುದ್ದಿ ಓದಿ