ವೈಜ್ಞಾನಿಕ ಬೆಳೆ ಹಾನಿ ವರದಿ ಸಲ್ಲಿಕೆಗೆ ಸಚಿವ ಎಂ.ಬಿ. ಪಾಟೀಲ ಸೂಚನೆ
ಲೋಕದರ್ಶನ ವರದಿ
ವಿಜಯಪುರ 10: ಜಿಲ್ಲೆಯಲ್ಲಿ -14 ಎಂಎಂ ಮಳೆ ಕೊರತೆಯಿಂದಾಗಿ ಬಿತ್ತನೆಯಾದ ಬೆಳೆಗಳಿಗೆ ತೇವಾಂಶ ಕೊರತೆಯಾಗಿದ್ದು ರೈತರ ಜಮೀನಿನಲ್ಲಿ ಹಾನೀಗೀಡಾದ ಬೆಳೆಗಳ ಭಾವಚಿತ್ರದೊಂದಿಗೆ ವೈಜ್ಞಾನಿಕವಾದ ನಿಖರ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿರುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಸಚಿವರಾದ ಎಂ.ಬಿ. ಪಾಟೀಲ ಅವರು ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆ ಆಧಾರಿತ ಕೃಷಿ ಬಹಳ ಕಷ್ಟ ಎಂಬುದನ್ನು ಬರ ಪರಿಸ್ಥಿತಿ ಅವಲೋಕನ ವೇಳೆ ಕಂಡುಕೊಂಡಿದ್ದೇನೆ. ಬಹುತೇಕ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ನೆರವಿಗೆ ಬರುವುದು ನಮ್ಮ ಕರ್ತವ್ಯವಾಗಿದೆ. ಈ ಕಾರ್ಯಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಚಿವರು ತಿಳಿಸಿದರು.
ಜಿಲ್ಲೆಯ ಬಹುತೇಕ ಕಡೆಗಳಲ್ಲಿ ತೊಗರಿ, ಸೂರ್ಯಕಾಂತಿ, ಕಬ್ಬು ಬೆಳೆ ಹಾನಿ ಸೇರಿದಂತೆ ಪ್ರತಿಯೊಂದೂ ಬೆಳೆಯನ್ನು ಅವಲೋಕಿಸಿರುವೆ. ಮುಖ್ಯಮಂತ್ರಿ ಅವರಿಗೆ ಈ ಕುರಿತು ಮನದಟ್ಟು ಮಾಡಿಕೊಡುವ ಮೂಲಕ ರೈತರಿಗೆ ನೆರವಿಗೆ ಧಾವಿಸುವ ನಿಟ್ಟಿನಲ್ಲಿ ಗಮನಸೆಳೆಯಲಾಗುವುದು ಎಂದರು. ವಾಸ್ತವ ಪರಿಸ್ಥಿತಿಯ ವರದಿ ಸಲ್ಲಿಸಲಾಗುವುದು. ಅದರಲ್ಲಿ ತಪ್ಪಾಗದಂತೆ ವಾಸ್ತವಾಂಶಗಳಿಂದ ಕೂಡಿದ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸ್ಪಷ್ಟವಾಗಿ ಸೂಚಿಸಿದ್ದೇನೆ ಎಂದರು. ಜಿಲ್ಲೆಯಲ್ಲಿ 7.75 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಯಿತ್ತು. ಆದರೆ ಇಲ್ಲಿಯವರೆಗೆ 6.79 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಶೇ. 87.7 ರಷ್ಟು ಪ್ರದೇಶದಲ್ಲಿ ಮಾತ್ರ ವಿವಿಧ ಬೆಳೆಗಳ ಬಿತ್ತನೆಯಾಗಿದೆ ಎಂದರು.
14 ಎಂಎಂ ಮಳೆ ಕೊರತೆ: 2026ನೇ ಸಾಲಿನಲ್ಲಿ ಜೂನ್ ತಿಂಗಳಲ್ಲಿ 90.4 ಎಂಎಂ ವಾಡಿಕೆ ಮಳೆಯಾಗಬೇಕಿತ್ತು. ಆದರೆ ಕೇವಲ 72.6 ಎಂಎಂ ಮಾತ್ರ ಮಳೆಯಾಗಿದೆ. ಅಂದರೆ -20 ಎಂಎಂ ಮಳೆಯಾಗಿದೆ. ಜುಲೈನಲ್ಲಿ ವಾಡಿಕೆಯಂತೆ 72.5ರಷ್ಟು ಮಳೆಯಾಗಬೇಕಿತ್ತು. ಅಷ್ಟು ಮಳೆಯಾಗಿದೆ. ಆಗಸ್ಟ್ 7ರವರೆಗೆ ವಾಡಿಕೆಯಂತೆ 19.4 ಎಂಎಂ ಮಳೆಯಾಗಬೇಕಿತ್ತು. ಆದರೆ ಕೇವಲ 12.5 ಎಂಎಂ ಮಳೆಯಾಗಿದ್ದರಿಂದ -36 ಎಂಎಂ ಮಳೆ ಅಭಾವವಾಗಿದೆ ಎಂದರು. ಜೂ. 1 ರಿಂದ ಆ. 8ರವರೆಗೆ ವಾಡಿಕೆಯಂತೆ 182.3 ಎಂಎಂ ಮಳೆಯಾಗಬೇಕಿತ್ತು. ಆದರೆ 157.6 ಎಂಎಂ ಮಳೆಯಾಗಿದೆ. ಇದರಿಂದಾಗಿ -14 ಎಂಎಂ ಮಳೆ ಕೊರತೆಯಾಗಿದೆ ಎಂದು ಸಚಿವರು ವಿವರಿಸಿದರು.