ಬೆಳಗಾವಿ

ಗಾಂಧೀಜಿ, ಶಾಸ್ತ್ರಿ ಅವರ ಆದರ್ಶಗಳು ಯುವಜನತೆಗೆ ದಾರೀದೀಪವಾಗಲಿ

ಗಾಂಧೀಜಿ, ಶಾಸ್ತ್ರಿ ಅವರ ಆದರ್ಶಗಳು ಯುವಜನತೆಗೆ ದಾರೀದೀಪವಾಗಲಿ

ಲೋಕದರ್ಶನ ವರದಿ  

 ಬೆಳಗಾವಿ 02:  ಮಹಾತ್ಮ ಗಾಂಧೀಜಿಯವರ ಸತ್ಯ, ಅಹಿಂಸೆ, ಸ್ವಾವಲಂಬನೆ, ಸ್ವಚ್ಛತೆ ಹಾಗೂ ಸರ್ವೋದಯದ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದ್ದು, ಯುವಜನತೆ ಆಧುನಿಕ ಜ್ಞಾನ ಮತ್ತು ತಂತ್ರಜ್ಞಾನದೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ. ಡಿ.ಎನ್‌. ಪಾಟೀಲ ಹೇಳಿದರು.  

ನಗರದ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 157ನೇ ಜಯಂತಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ 122ನೇ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ಗಾಂಧೀಜಿಯವರ ಸತ್ಯ ಮತ್ತು ಅಹಿಂಸೆಯ ತತ್ವಗಳು ಹಾಗೂ ಶಾಸ್ತ್ರಿಯವರ ಸರಳತೆ, ಪ್ರಾಮಾಣಿಕತೆ, ಶಿಸ್ತು ಮತ್ತು ನೈತಿಕತೆ ಇಂದಿನ ಯುವಜನತೆಗೆ ದಾರೀದೀಪವಾಗಬೇಕು ಎಂದರು.  

ಗಾಂಧೀಜಿಯವರು ಸ್ವಾತಂತ್ರ್ಯವನ್ನು ಕೇವಲ ರಾಜಕೀಯ ಮುಕ್ತಿಯೆಂದು ಪರಿಗಣಿಸದೆ, ಸಾಮಾಜಿಕ ಸಮಾನತೆ, ಆರ್ಥಿಕ ಸ್ವಾವಲಂಬನೆ, ಶ್ರಮದ ಗೌರವ ಹಾಗೂ ಮಾನವೀಯ ಮೌಲ್ಯಗಳ ಆಧಾರದ ಮೇಲೆ ಸಮಗ್ರ ಸಮಾಜ ನಿರ್ಮಾಣದ ಪರಿಕಲ್ಪನೆಯನ್ನು ಹೊಂದಿದ್ದರು. ಯುವಜನತೆ ಸತ್ಯ, ಸಹಿಷ್ಣುತೆ, ಶಾಂತಿ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.  

ಲಾಲ್ ಬಹದ್ದೂರ್ ಶಾಸ್ತ್ರಿಯವರ ಸರಳತೆ, ಪ್ರಾಮಾಣಿಕತೆ, ಶಿಸ್ತು ಹಾಗೂ ಕರ್ತವ್ಯನಿಷ್ಠೆ ಸಾರ್ವಜನಿಕ ಜೀವನಕ್ಕೆ ಮಾದರಿಯಾಗಿದೆ. ಅವರ ‘ಜೈ ಜವಾನ್, ಜೈ ಕಿಸಾನ್‌’ ಘೋಷಣೆ ದೇಶದ ಭದ್ರತೆಯಲ್ಲಿ ಯೋಧರ ಹಾಗೂ ಆಹಾರ ಭದ್ರತೆಯಲ್ಲಿ ರೈತರ ಮಹತ್ವವನ್ನು ಸಾರುತ್ತದೆ ಎಂದು ತಿಳಿಸಿದರು.  


ಸುದ್ದಿ ಓದಿ