ಬಿ ಎಸ್‌ ವೈ ಭ್ರಷ್ಟಾಚಾರ ಬಗ್ಗೆ ಪ್ರಧಾನಿ ತನಿಖೆಗೆ ಆದೇಶಿಸಲಿ; ಸಿದ್ದರಾಮಯ್ಯ ಆಗ್ರಹ

ಬಿ ಎಸ್‌ ವೈ  ಭ್ರಷ್ಟಾಚಾರ  ಬಗ್ಗೆ  ಪ್ರಧಾನಿ ತನಿಖೆಗೆ ಆದೇಶಿಸಲಿ; ಸಿದ್ದರಾಮಯ್ಯ  ಆಗ್ರಹ

ಬೆಂಗಳೂರು, ಜುಲೈ 26 - ಬಿಜೆಪಿ  ಎಂದರೆ   'ಭ್ರಷ್ಟಾಚಾರ ಜಾರಿ ಪಾರ್ಟಿ'.  ಬಿ.ಎಸ್. ಯಡಿಯೂರಪ್ಪ     ಭ್ರಷ್ಟಾಚಾರದ ಬಗ್ಗೆ ಅವರ ಪಕ್ಷದ ಶಾಸಕರೇ ಬಾಯ್ತುಂಬ ಮಾತನಾಡಿದ್ದಾರೆ.
‘ನಾ ಖಾವುಂಗಾ, ನಾ ಖಾನೆ ದೂಂಗಾ’ ಎಂದು ಹೇಳುತ್ತಿರುವ   ಪ್ರಧಾನಿ  ನರೇಂದ್ರ ಮೋದಿ  
ಅವರಿಗೆ  ಒಂದಿಷ್ಟು ಮರ್ಯಾದೆ ಇದ್ದರೆ, ಯಡಿಯೂರಪ್ಪ  ಮೇಲಿನ ಭ್ರಷ್ಟಾಚಾರ ಆರೋಪಗಳ  ಬಗ್ಗೆ ತನಿಖೆಗೆ ಆದೇಶಿಸಲಿ ಎಂದು   ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ  ಸೋಮವಾರ   ಆಗ್ರಹಿಸಿದ್ದಾರೆ.
ಚುನಾವಣೆಯಲ್ಲಿ ಸೋತಾಗ ಮುಖ್ಯಮಂತ್ರಿ ರಾಜೀನಾಮೆ ಕೊಡುವುದು ಪ್ರಜಾಪ್ರಭುತ್ವದ ರೂಢಿ. ಆದರೆ ಶಾಸನ ಸಭೆಯಲ್ಲಿ ಬಹುಮತ ಹೊಂದಿದ್ದ ಪಕ್ಷದ ಮುಖ್ಯಮಂತ್ರಿ ರಾಜೀನಾಮೆ ನೀಡಿದಾಗ, ಅದಕ್ಕೆ ಕಾರಣವನ್ನು ನೀಡಬೇಕಾಗುತ್ತದೆ.  ಬಿ.ಎಸ್.‌ ಯಡಿಯೂರಪ್ಪ
ರಾಜೀನಾಮೆಗೆ ಕಾರಣ ಅವರ ವಯಸ್ಸೇ ಇಲ್ಲವೇ,  ಅವರ ಸರ್ಕಾರದ ಭ್ರಷ್ಟಾಚಾರವೇ?   ಎಂದು  ಸರಣಿ ಟ್ವೀಟ್‌ ಗಳಲ್ಲಿ  ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬಿ.ಎಸ್.‌ ಯಡಿಯೂರಪ್ಪ  ಅವರು ಹೋದರೂ, ಇನ್ನೊಬ್ಬರು ಬಂದರೂ ಅದರ ಭ್ರಷ್ಟತೆಯ ಆತ್ಮ ಬದಲಾಗುವುದಿಲ್ಲ. ದುಡ್ಡಿನ ಬಲದಿಂದ ನಡೆಸಿದ್ದ ಆಪರೇಷನ್ ಕಮಲ ಎಂಬ ಅನೈತಿಕ ಹಾದಿಯಿಂದ ಅಧಿಕಾರಕ್ಕೆ ಬಂದಿರುವ  ರಾಜ್ಯ  ಬಿಜೆಪಿ   ಸರ್ಕಾರ ತೊಲಗಿದಾಗಲೇ ಕರ್ನಾಟಕದ ಜನತೆಗೆ ನೆಮ್ಮದಿ ಎಂದು ಹೇಳಿದ್ದಾರೆ.
ಬಿ.ಎಸ್.‌ ಯಡಿಯೂರಪ್ಪ   ಅವರ   ಬಗ್ಗೆ ನನಗೆ ಅನುಕಂಪವಿದೆ. ಅವರಿಗೆ ವಯಸ್ಸಾಯಿತೆಂದು ಅವರ ಪಕ್ಷದ ದೆಹಲಿ ನಾಯಕರೇ ಹೇಳುತ್ತಿದ್ದಾರೆ. ಅವರ ಮುಂದಿನ ಜೀವನ ಸುಖಕರವಾಗಿರಲಿ, ಅವರಿಗೆ ನೆಮ್ಮದಿ ಸಿಗಲಿ ಎಂದಷ್ಟೇ ನಾನು ಆಶಿಸುತ್ತೇನೆ  ಎಂದಿದ್ದಾರೆ.

ಮುಖ್ಯಮಂತ್ರಿ  ಬಿ.ಎಸ್.‌ ಯಡಿಯೂರಪ್ಪ  ರಾಜೀನಾಮೆ ನಿರೀಕ್ಷಿತವಾದುದು. ಹಿಂದೆಯೇ ನಾನು ಹೇಳಿರುವುದು ನಿಜವಾಗಿದೆ. ಈ ಬಗ್ಗೆ ಸಂಭ್ರಮ ಪಡುವಂತಹದ್ದೇನೂ ಇಲ್ಲ. ಭ್ರಷ್ಟ  ಬಿಜೆಪಿ  ಸರ್ಕಾರವನ್ನು   ಚುನಾವಣೆಯಲ್ಲಿ ಸೋಲಿಸಿದಾಗಲೇ ನಾವು ಸಂಭ್ರಮಿಸುವುದು. ಆ ದಿನಗಳು ಸದ್ಯದಲ್ಲಿಯೇ ಬರಲಿದೆ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.

ಸುದ್ದಿ ಓದಿ