ಕೊಪ್ಪಳದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ
ಕೊಪ್ಪಳ, ಅ.01: ರೋಟರಿ ಕ್ಲಬ್ ಸೌಭಾಗ್ಯ ಲಕ್ಷ್ಮೀ ವಿವಿ, ಸದ್ಭಾವನೆ ಸೌಹಾರ್ದ ಸಹಕಾರಿ ಸಂಘ, ಗಂಗಾ ಯಮುನಾ ಸೌಹಾರ್ದ ಸಹಕಾರಿ ಸಂಘ, ಜಿಲ್ಲಾ ವಕೀಲರ ಸಂಘ, ಶ್ರೀ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜ ಟ್ರಸ್ಟ್ ಕಮಿಟಿ, ಕೊಪ್ಪಳ ಸಿವಿಲ್ ಎಂಜಿನಿಯರ್ಸ್ ಹಾಗೂ ಆರ್ಕಿಟೆಕ್ಟ್ಸ ಸಂಘ, ಇನ್ನರ್ ವೀಲ್ ಕ್ಲಬ್ ಭಾಗ್ಯನಗರ ಮತ್ತು ಶ್ರೀಮತಿ ಗಂಗಮ್ಮ ಹನುಮಂತಪ್ಪ ಅಂಗಡಿ ಚಾರಿಟೇಬಲ್ ಟ್ರಸ್ಟ್ಗಳ ಸಂಯುಕ್ತ ಆಶ್ರಯದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
ನಗರದ ಹೊಸಪೇಟೆ ರಸ್ತೆಯ ಮೇಘರಾಜ ಕಲ್ಯಾಣ ಮಂಟಪದಲ್ಲಿ ಅ.5ರಂದು ಸೋಮವಾರ ಬೆಳಿಗ್ಗೆ 9ರಿಂದ ಸಂಜೆ 4.30ರವರೆಗೆ ಶಿಬಿರ ನಡೆಯಲಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಅಂಗಡಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಸಪ್ತಗಿರಿ ಆಸ್ಪತ್ರೆ, ಬೆಂಗಳೂರು ಇವರ ಸಹಯೋಗದಲ್ಲಿ ನಡೆಯಲಿರುವ ಶಿಬಿರದಲ್ಲಿ ಹೃದಯ, ನರ, ಮೂತ್ರಪಿಂಡ, ಕ್ಯಾನ್ಸರ್, ಸ್ತ್ರೀರೋಗ ಹಾಗೂ ಮೂಳೆ-ಕೀಲು ಸೇರಿದಂತೆ ವಿವಿಧ ಕಾಯಿಲೆಗಳ ಕುರಿತು ಬೃಹತ್ ಉಚಿತ ಆರೋಗ್ಯ ತಪಾಸಣೆ ನಡೆಸಲಾಗುವುದು ಎಂದು ತಿಳಿಸಿದರು.
ಬಿಪಿಎಲ್, ಅಂತ್ಯೋದಯ, ಹಸಿರು, ಯಶಸ್ವಿನಿ, ಕಾರ್ಡ್ ಹಾಗೂ ಇತರೆ ವಿಮಾ ಸೌಲಭ್ಯ ಹೊಂದಿರುವ ಹೊರರೋಗಿಗಳಿಗೆ ಹೆಚ್ಚಿನ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆಯ ಅಗತ್ಯವಿದ್ದಲ್ಲಿ ಸಪ್ತಗಿರಿ ಆಸ್ಪತ್ರೆ, ಬೆಂಗಳೂರಿನಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.
ಕೊಪ್ಪಳ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರಕ್ಕೆ ಆಗಮಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಅಂಗಡಿ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಚಂದ್ರಶೇಖರ್ ಸೊಪ್ಪಿಮಠ, ಗವಿಸಿದ್ದೇಶ್ವರ ಹಿರೇಮಠ, ಯಲ್ಲಪ್ಪ ಮೇಟಿ, ರಾಜು ಬಾಕಳೆ, ಶಾಂತಾ ಹಿರೇಮಠ, ಬಸವರಾಜ ಗೌರಿಮಠ, ಆಕಾಶ್ ಹುರುಕಡ್ಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.