ಮಹಾಲಿಂಗಪುರವನ್ನು ತಾಲೂಕು ಘೋಷಿಸಲು ಆಗ್ರಹಿಸಿ ರೈತರ ಬೃಹತ್ ಪ್ರತಿಭಟನೆ
ಲೋಕದರ್ಶನ ವರದಿ
ಮಹಾಲಿಂಗಪುರ 21: ಮಹಾಲಿಂಗಪುರವನ್ನು ಕೂಡಲೇ ತಾಲೂಕು ಎಂದು ಘೋಷಿಸಬೇಕು, ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಹಾಗೂ ಸಸಾಲಟ್ಟಿ ಎತ್ತಿನೀರಾವರಿ ಯೋಜನೆಯ ಬಾಕಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ, ಮಹಾಲಿಂಗಪುರ ತಾಲೂಕು ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಯಿತು.
ಮಹಾಲಿಂಗಪುರ ತಾಲೂಕು ಘೋಷಣೆಗೆ ಸಂಬಂಧಿಸಿದ ಹೋರಾಟದ 1,564ನೇ ದಿನದ ಅಂಗವಾಗಿ ಚನ್ನಮ್ಮ ವೃತ್ತದಲ್ಲಿರುವ ತಾಲೂಕು ಹೋರಾಟ ವೇದಿಕೆಯಲ್ಲಿ ರಾಜ್ಯಮಟ್ಟದ 46ನೇ ರೈತ ಹುತಾತ್ಮ ದಿನಾಚರಣೆ ಆಚರಿಸಲಾಯಿತು. ಹುತಾತ್ಮ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ರೈತರ ಸಮಸ್ಯೆಗಳು ಹಾಗೂ ತಾಲೂಕು ಘೋಷಣೆಯ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರಲಾಯಿತು.
ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಎಲ್ಲಾ ಮಾನದಂಡಗಳನ್ನು ಪೂರೈಸಿರುವ ಮಹಾಲಿಂಗಪುರವನ್ನು ತಾಲೂಕು ಘೋಷಿಸುವಲ್ಲಿ ಸರ್ಕಾರ ವಿಳಂಬ ಮಾಡುತ್ತಿದೆ. ಸರ್ಕಾರ ಕೂಡಲೇ ಸ್ಪಷ್ಟ ನಿರ್ಧಾರ ಕೈಗೊಂಡು ತಾಲೂಕು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ರೈತರ ಬೇಡಿಕೆಗಳನ್ನು ನಿರ್ಲಕ್ಷಿಸಿದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು, ಸಸಾಲಟ್ಟಿ ಎತ್ತಿನೀರಾವರಿ ಯೋಜನೆಯ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರು ಒದಗಿಸಬೇಕು ಎಂದು ಆಗ್ರಹಿಸಿದರು.
ತಾಲೂಕು ಹೋರಾಟ ಸಮಿತಿ ಮುಖಂಡ ದರೇಪ್ಪ ಸಾಂಗ್ಲೀಕರ ಮಾತನಾಡಿ, ಮಹಾಲಿಂಗಪುರ ತಾಲೂಕು ಘೋಷಣೆ, ಬರ ಪರಿಹಾರ, ರೈತರ ಸಾಲ ಮನ್ನಾ, ಬೆಳೆ ವಿಮೆ ಹಣ ಬಿಡುಗಡೆ, ಮಹಾದಾಯಿ ಹಾಗೂ ಕಾವೇರಿ ಯೋಜನೆ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಸರ್ಕಾರ ತಕ್ಷಣ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾಕಾರರು ಕಬ್ಬಿಗೆ ಪ್ರತಿ ಟನ್ಗೆ 5,000 ಎಫ್ಆರ್ಿ ನಿಗದಿ, ಬಾಕಿ ಇರುವ ಕಬ್ಬಿನ ಹಣವನ್ನು ರೈತರಿಗೆ ತಕ್ಷಣ ಪಾವತಿಸುವುದು, ರೈತರ ಸಾಲ ಹಾಗೂ ಬೆಳೆ ವಿಮೆ ಸಮಸ್ಯೆಗಳನ್ನು ಶೀಘ್ರ ಪರಿಹರಿಸುವಂತೆ ಆಗ್ರಹಿಸಿದರು.