ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ
ಲೋಕದರ್ಶನ ವರದಿ
ಬಳ್ಳಾರಿ,ಅ.08: ಸಾರ್ವಜನಿಕರ ಆರೋಗ್ಯ ಕಾಪಾಡುವ ಪ್ರಮುಖ ಉದ್ದೇಶದೊಂದಿಗೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಕಆಓ) ಕ್ಷೇಮಾಭಿವೃದ್ಧಿ ಸಂಘ ಹಾಗೂ ಆರೋಗ್ಯ ಇಲಾಖೆಯ ಜಂಟಿ ಸಹಯೋಗದಲ್ಲಿ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಶಿಬಿರದಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಒಟ್ಟು 17 ಪ್ರತ್ಯೇಕ ತಪಾಸಣಾ ಕೌಂಟರ್ಗಳನ್ನು ಸ್ಥಾಪಿಸಲಾಗಿತ್ತು. ಮನೋವೈದ್ಯಕೀಯ, ಚರ್ಮರೋಗ, ಇಸಿಜಿ, ಎಕ್ಸ್-ರೇ ಹಾಗೂ ಕ್ಷಯರೋಗ ಸೇರಿದಂತೆ ತಲೆಮೂಳೆಯಿಂದ ಕಾಲಿನವರೆಗೆ ಸಂಪೂರ್ಣ ದೈಹಿಕ ಮತ್ತು ಮಾನಸಿಕ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಒಟ್ಟು 216 ನೌಕರರು ಶಿಬಿರದಲ್ಲಿ ಭಾಗವಹಿಸಿ ವಿವಿಧ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯಗಳನ್ನು ಪಡೆದುಕೊಂಡರು.