ಮಾರಿಕಾಂಬಾ ಜಾತ್ರೆ ರಥೋತ್ಸವ-ಸಾಂಸ್ಕೃತಿಕ ಸಮಿತಿ
ಸಾಗರ 31 : ಮಾರಿಕಾಂಬಾ ದೇವಿ ಉತ್ಸವಮೂರ್ತಿ ಮೆರವಣಿಗೆಗೆ ಸುಮಾರು 5 ಲಕ್ಷ ರೂ. ವೆಚ್ಚದ ನೂತನ ರಥ ನಿರ್ಮಿಸಿದ್ದು ಶುಕ್ರವಾರ ಮಹಾಗಣಪತಿ ದೇವಸ್ಥಾನದಲ್ಲಿ ರಥೋತ್ಸವ ಸಮಿತಿ ವತಿಯಿಂದ ಪೂಜೆ ಸಲ್ಲಿಸಲಾಯಿತು. ಗಣಪತಿ ದೇವಸ್ಥಾನದ ಅರ್ಚಕರಾದ ಲಕ್ಷ್ಮಣ್ ಜೋಯಿಸ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ರಥೋತ್ಸವ ಸಮಿತಿ ಸಂಚಾಲಕ ಕೆ.ಸಿ.ನವೀನ್, ದೇವಸ್ಥಾನದ ರಥ ಹಳೆಯದ್ದಾಗಿದ್ದು ಅಮ್ಮನವರ ಉತ್ಸವ ಮೂರ್ತಿ ಮೆರವಣಿಗೆಗೆ ಸಮಸ್ಯೆ ಆಗುತ್ತಿರುವುದನ್ನು ಮನಗಂಡು ಸಮಿತಿಯಿಂದ ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ರಥ ನಿರ್ಮಿಸಿದೆ. ರಥದ ಸುರಕ್ಷತೆಯ ಪರೀಕ್ಷೆ ಸಹ ನಡೆದಿದೆ ಎಂದು ಹೇಳಿದರು.
ಗೋಪುರ ಸಮಿತಿ ಸಂಚಾಲಕ ಪುರುಷೋತ್ತಮ ಮಾತನಾಡಿ, ಫೆ. 3ರಂದು ರಾತ್ರಿ ಅಮ್ಮನವರ ಉತ್ಸವ ಮೂರ್ತಿ ಮೆರವಣಿಗೆ ನಡೆಯಲಿದ್ದು, ವಿವಿಧ ಕಲಾ ತಂಡಗಳು ಭಾಗವಹಿಸಲಿದೆ. ಜಾತ್ರೆ ಹಿನ್ನೆಲೆಯಲ್ಲಿ ಗೋಪುರದ ಸುಣ್ಣಬಣ್ಣ ಕಾರ್ಯ ಮುಗಿದಿದೆ. ತವರುಮನೆ, ಗಂಡನ ಮನೆ ದೇವಸ್ಥಾನದ ಬಣ್ಣದ ಜೊತೆ ರುದ್ರಭೂಮಿ, ಶಿಶುವಿಹಾರ ಎಲ್ಲದ್ದಕ್ಕೂ ಸುಣ್ಣಬಣ್ಣ ಮಾಡಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾರಿಕಾಂಬಾ ನ್ಯಾಸ ಪ್ರತಿಷ್ಟಾನದ ಪ್ರಧಾನ ಕಾರ್ಯದರ್ಶಿ ಬಿ. ಗಿರಿಧರ ರಾವ್, ಸುಧೀರ್ ರಾವ್, ಮುರುಗನ್ ಮೇಸ್ತ್ರಿ, ಬಸವರಾಜ್ ಜಿ., ಅರುಣ ಪುರುಷೋತ್ತಮ, ಜಯರಾಮ್, ರಾಘವೇಂದ್ರ, ವಸಂತ ಕುಮಾರ್ ಇನ್ನಿತರರು ಹಾಜರಿದ್ದರು.
ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ : ಹಿಂದಿನಂತೆ ಈ ವರ್ಷ ಸಹ ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ಫೆಬ್ರವರಿ 4 ರಿಂದ 11ರವರೆಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದೆ. ಗಾಂಧಿ ಮೈದಾನದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಮಾರಿಕಾಂಬಾ ವೇದಿಕೆ ನಿರ್ಮಾಣವನ್ನು ಸಾಂಸ್ಕೃತಿಕ ಸಮಿತಿ ಸಂಚಾಲಕರು ಮತ್ತು ಸದಸ್ಯರು ಶನಿವಾರ ಪರೀಶೀಲನೆ ನಡೆಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ವೈಭವವಾಗಿ ನಡೆಸಲು ಬೇಕಾದ ಸಿದ್ದತೆ ಪರೀಶೀಲನೆ ನಡೆಸಿದರು.
ಪ್ರತಿದಿನ ಸಂಜೆ 5-30ರಿಂದ ರಾತ್ರಿ 12ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶಿಸ್ತುಬದ್ದವಾಗಿ ನಡೆಸಲು ಸಭೆಯಲ್ಲಿ ತೀಮಾನಿಸಲಾಯಿತು. ಫೆ. 4ರಂದು ರಾತ್ರಿ 9-30ಕ್ಕೆ ಸುನ್ನುತ್ ಶಾಲೋಮ್ ಅವರ ತತ್ವಗೀತೆ, ಭಾವಗೀತೆ, ಜಾನಪದ ಗೀತೆ ನಡೆಯಲಿದೆ. ಫೆ. 5ರಂದು ಸಂಜೆ 7ಕ್ಕೆ ಜಾಥ್ರೋತ್ಸವ ಉದ್ಘಾಟನೆಯನ್ನುಶಾಸಕ ಗೋಪಾಲಕೃಷ್ಣ ಬೇಳೂರು ನೆರವೇರಿಸಲಿದ್ದಾರೆ. ವಿಶೇಷ ಅತಿಥಿಯಾಗಿ ಚಿತ್ರನಟ ಡಾ. ಶಿವರಾಜ ಕುಮಾರ್ ಪಾಲ್ಗೊಳ್ಳುವರು. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರ್ಪ, ಸಂಸದ ಬಿ. ವೈ. ರಾಘವೇಂದ್ರ ಇನ್ನಿತರರು ಪಾಲ್ಗೊಳ್ಳಲಿದ್ದು, ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ. ಅದೇ ದಿನ ರಾತ್ರಿ 9-30ಕ್ಕೆ ಝೇಂಕಾರ್ ಮೇಲೋಡಿಸ್ ಅವರ ರಸಮಂಜರಿ ಕಾರ್ಯಕ್ರಮ ಇರುತ್ತದೆ.
ಫೆ. 6ರಂದು ರಾತ್ರಿ 9-30ಕ್ಕೆ ಸುರೇಖ ಹೆಗಡೆ ತಂಡದಿಂದ ರಸಮಂಜರಿ ಕಾರ್ಯಕ್ರಮ ಇರುತ್ತದೆ. ಫೆ. 7ರಂದು ಖ್ಯಾತ ಗಾಯಕ, ಸಂಗೀತ ನಿರ್ದೇಶಕ ರಾಮಚಂದ್ರ ಹಡಪದ ತಂಡದಿಂದ ರಸಮಂಜರಿ, ಫೆ. 8ರಂದು ಝೀಕನ್ನಡ ಖ್ಯಾತಿಯ ಗಾಯಕ ಅನಂತ ವಿಕ್ರಮ ಅವರಿಂದ ಚಲನಚಿತ್ರ ಗೀತೆ, ಭಾವಗೀತೆ, ಜಾನಪದ ಗೀತೆ ಕಾರ್ಯಕ್ರಮ ಇರುತ್ತದೆ. ಫೆ. 9ರಂದು ರಾತ್ರಿ 8-30ಕ್ಕೆ ವಿದ್ವಾನ್ ನೌಷಾದ್ ಹರ್ಲಾಪುರ, ವಿದ್ವಾನ್ ನಿಷಾದ್ ಹರ್ಲಾಪುರ ಅವರಿಂದ ದಾಸರ ಪದ ಜಾನಪದ ಗೀತೆ ಗಾಯನ ಇರುತ್ತದೆ. ಫೆ. 10ರಂದು ರಾಥ್ರಿ ಮೆಲ್ವಿನ್ ಇವೆಂಟ್ಸ್ ಅವರಿಂದ ಝೀಕನ್ನಡ ಖ್ಯಾತಿಯ ಗಾಯಕರಿಂದ ರಸಮಂಜರಿ ಕಾರ್ಯಕ್ರಮ ಇರುತ್ತದೆ. ಫೆ. 11ರಂದು ರಾತ್ರಿ 8-30ಕ್ಕೆ ವಿದ್ವಾನ್ ದತ್ತಮೂರ್ತಿ ಭಟ್ ನೇತೃತ್ವದಲ್ಲಿ ನಾಟ್ಯಶ್ರೀ ಕಲಾತಂಡದಿಂದ ಯಕ್ಷಗಾನ ಇರುತ್ತದೆ.
ಈ ಎಲ್ಲಾ ಪ್ರಮುಖ ಕಾರ್ಯಕ್ರಮಗಳ ಜೊತೆಗೆ ಪ್ರತಿದಿನ ಸಂಜೆ 5-30ರಿಂದ ತಾಲ್ಲೂಕಿನ ಹೆಸರಾಂತ ಕಲಾವಿದರಿಂದ ಗಾಯನ, ಭರತನಾಟ್ಯ, ನೃತ್ಯ, ನಾಟಕ, ಕರಾಟೆ ಜೂಡೋ ಪ್ರದರ್ಶನ, ಮಲ್ಲಗಂಭ ಪ್ರದರ್ಶನ ಇನ್ನಿತರೆ ಕಾರ್ಯಕ್ರಮ ನಡೆಯಲಿದೆ. ಇದರ ಜೊತೆಗೆ ದೇವಸ್ಥಾನದ ಪಕ್ಕದ ವೇದಿಕೆಯಲ್ಲಿ ಪ್ರತಿದಿನ ಸಂಜೆ 5-30ರಿಂದ ಭಜನೆ ಕಾರ್ಯಕ್ರಮ ಇರುತ್ತದೆ ಎಂದು ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಸಾಂಸ್ಕೃತಿಕ ಸಮಿತಿ ಸಂಚಾಲಕ ರಾಮಚಂದ್ರ, ಸಹ ಸಂಚಾಲಕರಾದ ಲೋಕೇಶ ಕುಮಾರ್, ಗಂಗಾಧರ ಜಂಬಿಗೆ, ಪ್ರಮುಖರಾದ ಎಸ್.ಬಸವರಾಜ್, ಚೂಡಾಮಣಿ ರಾಮಚಂದ್ರ, ಎನ್.ಲಲಿತಮ್ಮ, ಮಹೇಶ್ ಹೆಗಡೆ, ಜಿ.ನಾಗೇಶ್, ದೀಪಕ್ ಸಾಗರ, ಗೀರೀಶ್ ಕೋವಿ, ಬಿ.ಟಿ.ರವೀಂದ್ರ, ನಾಗರಾಜ ಗುಡ್ಡೆಮನೆ, ಡಾ. ಕೆಳದಿ ವೆಂಕಟೇಶ ಜೋಯಿಸ್, ನಾರಾಯಣಪ್ಪ, ಪ್ರದೀಪ್ ಆಚಾರಿ, ತಾಲ್ಲೂಕು ಆಡಳಿತದ ಪರವಾಗಿ ನೇಮಕಗೊಂಡಿರುವ ವಿ.ಟಿ.ಸ್ವಾಮಿ, ಡಾ. ಅನ್ನಪೂರ್ಣ ಇನ್ನಿತರರು ಹಾಜರಿದ್ದರು.