ಕ್ಷುಲ್ಲಕ ಕಾರಣದಿಂದ ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಹತ್ಯೆ : ಕಿತ್ತೂರು ಪೊಲೀಸರಿಂದ ಆರೋಪಿ ಬಂಧನ

ಕ್ಷುಲ್ಲಕ ಕಾರಣದಿಂದ ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಹತ್ಯೆ : ಕಿತ್ತೂರು ಪೊಲೀಸರಿಂದ ಆರೋಪಿ ಬಂಧನ

ಬೆಳಗಾವಿ : ಕ್ಷುಲ್ಲಕ ಕಾರಣದ ಹಿನ್ನೆಲೆಯಲ್ಲಿ ವ್ಯಕ್ತಿಯೊರ್ವನನ್ನು ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ದೇವಗಾಂವದಲ್ಲಿ ನಡೆದಿದ್ದು, ಪ್ರಕರಣದ ಜಾಡು ಹಿಡಿದ ಕಿತ್ತೂರು ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಹತ್ಯೆಯಾದ ವ್ಯಕ್ತಿಯನ್ನು ದೇವಗಾಂವ ಗ್ರಾಮದ ನಿವಾಸಿ ಮಹಾಂತೇಶ ನಿಂಗಪ್ಪ ಹುಚ್ಚನವರ (52) ಎಂದು ಗುರುತಿಸಲಾಗಿದೆ.  ದಿ. 6ರಂದು ನಸುಕಿನ ಜಾವ ಸುಮಾರು 2:30 ಗಂಟೆಯ ಸಮಯದಲ್ಲಿ ದೇವಗಾಂವ ಗ್ರಾಮದ ಬಸ್ ನಿಲ್ದಾಣದ ಹತ್ತಿರವಿರುವ ಕಾಳಾರ ಎಂಬುವವರ ಮನೆಯ ಮುಂದೆ ಈ ಕೃತ್ಯ ನಡೆದಿದೆ. 

    ಮೃತ ಮಹಾಂತೇಶ ಅವರು ಆರೋಪಿ ಪ್ರಕಾಶ್ ಕಲ್ಲಪ್ಪ ಕಾಳಾರ ಎಂಬುವವರ ಮನೆಯಲ್ಲಿ ಮಲಗಿದ್ದರು. ಈ ವೇಳೆ "ನನ್ನಮನೆಯಲ್ಲಿ ಏಕೆ ಮಲಗಿದ್ದೀಯಾ?" ಎಂಬ ವಿಷಯವಾಗಿ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಜಗಳ ವಿಕೋಪಕ್ಕೆ ಹೋದಾಗ, ಆರೋಪಿ ಪ್ರಕಾಶ್ ಕಾಳಾರನು ಮಹಾಂತೇಶನನ್ನು ಮನೆಯ ಬಳಿ ಕಲ್ಲನ್ನು ತಲೆಯ ಮೇಲೆ ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. 

   ಈ ಬಗ್ಗೆ ಮೃತನ ಸಂಬಂಧಿಕ ರಾಜು ಪುಂಡಲೀಕ್ ಹುಚ್ಚನವರ (ಸಾ: ದೇವಗಾಂವ ಇವರು ನೀಡಿದ ದೂರಿನ ಮೇರೆಗೆ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿದ ಕಿತ್ತೂರು ಪೊಲೀಸರು ಆರೋಪಿ ಪ್ರಕಾಶ್ ಕಲ್ಲಪ್ಪ ಕಾಳಾರನನ್ನು ದಸ್ತಗಿರಿ ಮಾಡಿದ್ದಾರೆ. ಆರೋಪಿಯ ಮೇಲೆ BNS-2023 ರ ಕಲಂ 103(1) ರ ಅಡಿಯಲ್ಲಿ (ಕೊಲೆ ಪ್ರಕರಣ) ಪ್ರಕರಣ ದಾಖಲಿಸಲಾಗಿದ್ದು, ಇಂದು ದಿ.‌ 6ರಂದು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. 

    ಈ ಕಾರ್ಯಾಚರಣೆಯಲ್ಲಿ   ಬೈಲಹೊಂಗಲ ಡಿಎಅ್ ಪಿ ಡಾ. ವೀರಯ್ಯ ಹಿರೇಮಠ  ಇವರ ಮಾರ್ಗದರ್ಶನದಲ್ಲಿ ಕಿತ್ತೂರು ಸಿಪಿಐ ಶಿವಾನಂದ ಗುಡಗನಟ್ಟಿ, ಪಿಎಸ್ ಐ ಪ್ರವೀಣ ಆರ್ ಗಂಗೋಳ ಮತ್ತು ಕಿತ್ತೂರ ಠಾಣೆಯ ಸಿಬ್ಬಂದಿಗಳು ಆರೋಪಿತನ ಬಂಧನಕ್ಕೆ ಶ್ರಮಿಸಿರುತ್ತಾರೆ. 

    ತಂಡದ ಈ ಕಾರ್ಯಕ್ಕೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ ಬಸರಗಿ  ಇವರು ಶ್ಲಾಘಿಸಿರುತ್ತಾರೆ.

ಸುದ್ದಿ ಓದಿ