ಮಹಾಲಿಂಗಪುರ ಪುರಸಭಾ ಸಾಮಾನ್ಯ ಸಭೆ : ಮಲೀನ ಮುಕ್ತ ನಗರಕ್ಕಾಗಿ ರೂ.118.50 ಕೋಟಿ ಬೃಹತ್ ವೆಚ್ಚದ ಡಿಪಿಆರ್ಗೆ ಅನುಮೋದನೆ
ಮಹಾಲಿಂಗಪುರ : ಮಂಗಳವಾರ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ 118.50 ಕೋಟಿ ರೂ. ವೆಚ್ಚದ ಒಳಚರಂಡಿ ಯೋಜನೆಯ ವಿಸ್ತೃತ ಯೋಜನಾ ವರದಿ(ಡಿಪಿಆರ್)ಗೆ ಪುರಸಭಾ ಸದಸ್ಯರು ಅನುಮೋದನೆ ನೀಡಿದರು.
ಇಡೀ ಪಟ್ಟಣದ ಶೌಚಾಲಯ ಮತ್ತು ಮಲೀನ ನೀರನ್ನು ಯುಜಿಡಿ ಮೂಲಕ ಊರ ಹೊರಗಿನ ಗ್ರಾಮ ಸಾರ ಘಟಕಕ್ಕೆ ಸಾಗಿಸಿ ಮಲೀನ ಮುಕ್ತ ನಗರವನ್ನಾಗಿಸುವ ಘನ ಉದ್ದೇಶಕ್ಕಾಗಿ ಸಮೀಪದ ಸಂಗಾನಟ್ಟಿ ರಸ್ತೆ ಬದಿ 3 ಎಕರೆ ಜಮೀನು ಖರೀದಿ ಸೇರಿದಂತೆ ಬೃಹತ್ ಕಾಮಗಾರಿಗೆ ಅನುಮೋದನೆ ನೀಡಲಾಯಿತು.
ಕರ್ನಾಟಕ ಪುರಸಭೆ ಕಾಯ್ದೆ 1964 ರಂತೆ ಸ್ಥಿರಾಸ್ತಿ ನೋಂದಣಿಗೆ ಲಕ್ಷದವರೆಗೆ 500, 1ಲಕ್ಷದಿಂದ 9 ಲಕ್ಷದವರೆಗೆ 800, 10 ಲಕ್ಷದ ಮೇಲ್ಪಟ್ಟು 1500, 15 ಲಕ್ಷದ ಮೇಲ್ಪಟ್ಟು 2000 ರೂ. ಬೋಜಾ ದಾಖಲು ದರ ನಿಗದಿಪಡಿಸಲಾಯಿತು.
ಹಿಂದಿನ ಹಣಕಾಸು ಯೋಜನೆಗಳ ಉಳಿಕೆ ಅನುದಾನ 27.02 ಲಕ್ಷ ರೂಗಳಲ್ಲಿ ಜೋಡು ರಸ್ತೆ ರಿಪೇರಿ ಮತ್ತು ಸ್ಮಶಾನ ಗಟಾರದ ಆರ್ ಸಿ ಸಿ ಕಾಮಗಾರಿ, 24 ತಾಸಿನೊಳಗೆ ಮೋಟಾರ್ ದುರಸ್ತಿ ಷರತ್ತಿನ ಮೇಲೆ ನಗರದ ಕುಡಿಯುವ ನೀರಿನ ಟೆಂಡರ್ ಹಾಗೂ ಚೆನ್ನಮ್ಮ ವೃತ್ತದ ಹತ್ತಿರ 13.50 ಲಕ್ಷ ವೆಚ್ಚದಲ್ಲಿ ಫುಟ್ ಪಾತ್ ಮತ್ತು ಪೆವರ್ ಬ್ಲಾಕ್ ಕಾಮಗಾರಿ ಮತ್ತು ಜಿಮ್ ನಿರ್ವಹಣಾ ಟೆಂಡರ್, 35 ಅರ್ಹ ಫಲಾನುಭವಿಗಳಿಗೆ ವಾರದಲ್ಲಿ ಸಿಲಿಂಡರ್ ವಿತರಣೆ,ಶವ ಸಂಸ್ಕಾರ ವಾಹನಕ್ಕೆ ದರ ನಿಗದಿ, ಭೂಬದಲಾವಣೆ,ಕಳೆದ 3 ತಿಂಗಳ ಜಮಾ ಖರ್ಚು ಸೇರಿದಂತೆ ಹಲವಾರು ವಿಷಯಗಳಿಗೆ ಅನುಮೋದನೆ ನೀಡಲಾಯಿತು.
ಪುರಸಭಾ ಸದಸ್ಯ ಜಾವೇದ ಭಾಗವಾನ ಅವರು ನ.9ರ ಸಭೆಯ ಅಧ್ಯಕ್ಷರ ಅಪ್ಪಣೆಯ ಮೇರೆಗೆ ಅನುಮೋದಿತ ವಿಷಯಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಕಾಂಗ್ರೆಸ್ ಸದಸ್ಯರ ವಾರ್ಡುಗಳಿಗೆ ಅನ್ಯಾಯ ಮಾಡಲಾಗಿದೆ, ಬರೀ ಬಿಜೆಪಿ ಪಕ್ಷದ ಸದಸ್ಯರ ವಾರ್ಡುಗಳ ಕಾಮಗಾರಿಗಳಿಗೆ ಅನುಮೋದನೆ ನೀಡಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿದರು.
ಇದಕ್ಕುತ್ತರವಾಗಿ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಹಾಗೂ ಆಡಳಿತರೂಢ ಭಾಜಪ ಸದಸ್ಯರು ಪ್ರತಿಕ್ರಿಯಿಸಿ, ಆದ್ಯತೆಯ ಮೇರೆಗೆ ಅನುದಾನ ನೀಡಲಾಗಿದ್ದು ಇದರಲ್ಲಿ ಯಾವುದೇ ತಾರತಮ್ಯವಿಲ್ಲ ಎಂದರು.
ಪುರಸಭಾ ಅಧ್ಯಕ್ಷೆ ಸ್ನೇಹಲ್ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಪುರಸಭಾ ಸದಸ್ಯರಾದ ಯಲ್ಲನಗೌಡ ಪಾಟೀಲ, ಶೇಖರ ಅಂಗಡಿ, ಜಾವೇದ ಭಾಗವಾನ, ಬಲವಂತಗೌಡ ಪಾಟೀಲ, ಬಸವರಾಜ ಹಿಟ್ಟಿನಮಠ, ಪ್ರಹ್ಲಾದ ಸಣ್ಣಕ್ಕಿ, ಚನ್ನಬಸು ಯರಗಟ್ಟಿ, ರವಿ ಜವಳಗಿ, ರಾಜು ಚಮಕೇರಿ, ಡಾ.ಸವಿತಾ ಕೋಳಿಗುಡ್ಡ, ಸವಿತಾ ಮಾಂಗ, ಸರಸ್ವತಿ ರಾಮೋಜಿ, ಶೀಲಾ ಬಾವಿಕಟ್ಟಿ , ಭಾವನಾ ಪಾಟೀಲ, ಮುಸ್ತಾಕ ಚಿಕ್ಕೋಡಿ, ಬಸವರಾಜ ಬುರುಡ, ರಾಜುಗೌಡ ಗೌಡಪ್ಪಗೋಳ, ಲಕ್ಷ್ಮಿ ಮುದ್ದಾಪುರ, ಸ್ಥಾಯಿ ಸಮಿತಿ ನೂತನ ಛೇರ್ಮನ್ ಸಜನಸಾಬ ಪೆಂಡಾರಿ ಮತ್ತು ಸಿಬ್ಬಂದಿ ಇದ್ದರು.