ಮಂಗಲಗಿ ಗ್ರಾಮದಲ್ಲಿ ಪಡಿತರ ವಿತರಣಾ ಕೇಂದ್ರಕ್ಕೆ ಶಾಸಕರ ಭೇಟಿ ಹಿ ಪರೀಶೀಲನೆ
ಬೀದರ್ 29 : ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಮಂಗಲಗಿ ಗ್ರಾಮದ ಪಡಿತರ ವಿತರಣಾ ಕೇಂದ್ರಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದರು. ಸಾರ್ವಜನಿಕರಿಗೆ ಪಡಿತರ ವಿತರಣೆ ವೇಳೆ ಉಂಟಾಗಿದ್ದ ತಾಂತ್ರಿಕ ಸಮಸ್ಯೆಗಳ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು, ಫಲಾನುಭವಿಗಳ ಅಹವಾಲುಗಳನ್ನು ಆಲಿಸಿ ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಂಡರು ಕ್ಷೇತ್ರದಾದ್ಯಂತ ಇದೆ ಸಮಸ್ಯೆ ಇದೆ ಎನ್ನುವುದು ತಿಳಿದ ಬಳಿಕ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಚರ್ಚಿಸಿ, ತಾಂತ್ರಿಕ ದೋಷಗಳನ್ನು ಶೀಘ್ರವಾಗಿ ಸರಿಪಡಿಸಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಪಡಿತರ ವ್ಯವಸ್ಥೆ ಅತ್ಯಂತ ಮಹತ್ವದ್ದಾಗಿದ್ದು, ಫಲಾನುಭವಿಗಳು ತಮ್ಮ ಹಕ್ಕಿನ ಆಹಾರ ಧಾನ್ಯಗಳನ್ನು ಪಡೆಯಲು ಅನಗತ್ಯ ತೊಂದರೆ ಅನುಭವಿಸಬಾರದು ಎಂದು ಹೇಳಿದರು. ಪಡಿತರ ವಿತರಣೆಯಲ್ಲಿ ಪಾರದರ್ಶಕತೆ ಹಾಗೂ ಸಮಯೋಚಿತ ಸೇವೆ ಒದಗಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದ್ದು, ಈ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯಕ್ಕೆ ಅವಕಾಶವಿಲ್ಲ ಎಂದು ತಿಳಿಸಿದರು.ಪ್ರಸ್ತುತ ಈ ತಿಂಗಳು ಕೇಂದ್ರ ಸರ್ಕಾರದ ಎರಡು ತಿಂಗಳ ಅನ್ನಭಾಗ್ಯ ಯೋಜನೆಯ 10 ಕೆಜಿ ಅಕ್ಕಿ ಮಾತ್ರ ವಿತರಣೆ ಆಗುತ್ತಿದ್ದು, ರಾಜ್ಯ ಸರ್ಕಾರದ ಪಾಲಿನ ಅಕ್ಕಿ ಪೂರೈಕೆ ಸ್ಥಗಿತಗೊಂಡಿರುವುದರಿಂದ ಸಾರ್ವಜನಿಕರಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ.
ರಾಜ್ಯ ಸರ್ಕಾರವು ಯಾವುದೇ ವಿಳಂಬ ಮಾಡದೆ ತನ್ನ ಪಾಲಿನ ಅಕ್ಕಿ ವಿತರಣೆಯನ್ನು ತಕ್ಷಣ ಪುನರಾರಂಭಿಸಬೇಕು ಎಂದು ಅವರು ಒತ್ತಾಯಿಸಿದರು. ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ, ಅವುಗಳ ಪರಿಹಾರಕ್ಕಾಗಿ ನಿರಂತರವಾಗಿ ಶ್ರಮಿಸುವುದು ತಮ್ಮ ಆದ್ಯತೆಯಾಗಿದ್ದು, ಸಾರ್ವಜನಿಕರ ಹಿತಾಸಕ್ತಿಗೆ ಯಾವುದೇ ರೀತಿಯ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ತಿಳಿಸಿದರು. ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರ ಮಾಧ್ಯಮ ಸಂಯೋಜಕ, ಸಹಾಯಕ ನಾಗೇಶ್ ಸಿದ್ದಾ.