ರಾಷ್ಟ್ರೀಯ ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ಶಾಸಕಿ ಅಂಜಲಿ ಮನವಿ
ಕಕ್ಕೇರಿ 16: ಬೆಳಗಾವಿ– ಪಣಜಿ ರಾಷ್ಟ್ರೀಯ ಹೆದ್ದಾರಿ ದುರಸ್ತಿ ಕಾರ್ಯ ಅರ್ಧಕ್ಕೆ ಸ್ಥಗಿತಗೊಂಡಿದ್ದು, ಕೂಡಲೇ ಈ ರಸ್ತೆ ದುರಸ್ತಿ ಪೂರ್ಣಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು, ಅಪಘಾತಗಳನ್ನು ತಪ್ಪಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ ಗಡ್ಕರಿ ಅವರಿಗೆ ಖಾನಾಪುರ ಶಾಸಕಿ ಡಾ ಅಂಜಲಿ ಹೇಮಂತ ನಿಂಬಾಳ್ಕರ ಮನವಿ ಮಾಡಿದ್ದಾರೆ.
ಖಾನಾಪೂರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ಅರ್ಧಕ್ಕೆ ನಿಂತಿದೆ. ಖಾನಾಪೂರ – ರಾಮನಗರ ನಡುವೆ ಅರೆಬರೆ ಕಾಮಗಾರಿ ಆಗಿದ್ದು, ಗ್ರಾಮಸ್ಥರಿಗೆ ಇದರಿಂದ ಭಾರಿ ಅನಾನುಕೂಲವಾಗಿದೆ. ವಾಹನಗಳು ಸಂಚರಿಸಲು ಬಾರದಷ್ಟು ರಸ್ತೆ ಹದಗೆಟ್ಟಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ ಗಡ್ಕರಿ ಅವರನ್ನು ಭೇಟಿ ಮಾಡಿದ ಶಾಸಕಿ ಡಾ ಅಂಜಲಿ ಹೇಮಂತ ನಿಂಬಾಳ್ಕರ, ವಾಹನಗಳು ಸಂಚರಿಸಲು ಬಾರದಷ್ಟು ರಸ್ತೆ ಹದಗೆಟ್ಟಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಸುತ್ತಮುತ್ತಲಿನ ಗ್ರಾಮಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಖಾನಾಪುರ ಬೈಪಾಸ್ ಸ್ಟಾರ್ಟಿಂಗ್ ಪಾಯಿಂಟ್, ಎಂಡಿಂಗ್ ಪಾಯಿಂಟ್, ಸಿಸಿ ರಸ್ತೆ ಮತ್ತು ವಿದ್ಯುದೀಕರಣ, ಫುಟ್ಪಾಥನ ಎರಡೂ ಬದಿಗಳಲ್ಲಿ ಚರಂಡಿಗಳ ನಿರ್ಮಾಣ,ಖಾನಾಪುರ ಪಟ್ಟಣಕ್ಕೆ ಬೀದಿ ದೀಪಗಳನ್ನು ಅಳವಡಿಸುವುದು, ಖಾನಾಪುರದ ಮಲಪ್ರಭಾ ನದಿಗೆ ಅಡ್ಡಲಾಗಿರುವ ಸೇತುವೆಯ ಪುನರನಿರ್ಮಾಣ ಸೇರಿ ಅಭಿವೃದ್ಧಿ ಕಾಮಗಾರಿಯನ್ನು ಮಂಜೂರು ಮಾಡಿಕೊಡಬೇಕೆಂದು ಸಚಿವರಲ್ಲಿ ಮನವಿ ಮಾಡಿದ್ದಾರೆ.