ಅಂತರರಾಷ್ಟ್ರೀಯ

ರಿಷಿ ಸುನಕ್ ಅವರನ್ನು ಸೋಲಿಸಿ ಬ್ರಿಟನ್ ಪ್ರಧಾನಿಯಾಗಿ ಲಿಜ್ ಟ್ರಸ್ ಆಯ್ಕೆ

ರಿಷಿ ಸುನಕ್ ಅವರನ್ನು ಸೋಲಿಸಿ ಬ್ರಿಟನ್ ಪ್ರಧಾನಿಯಾಗಿ ಲಿಜ್ ಟ್ರಸ್ ಆಯ್ಕೆ

ಲಂಡನ್ : ಸೆಪ್ಟೆಂಬರ್ 05:  ಬ್ರಿಟನ್ ಪ್ರಧಾನಿಯಾಗಿ ಲಿಜ್ ಟ್ರಸ್ ಎಂದು ಕರೆಯಲ್ಪಡುವ ಮೇರಿ ಎಲಿಜಬೆತ್ ಟ್ರಸ್ ಆಯ್ಕೆಯಾಗಿದ್ದಾರೆ.  ಅವರು ಕನ್ಸರ್ವೇಟಿವ್ ಪಕ್ಷದ ನಾಯಕತ್ವ ಆಯ್ಕೆ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಭಾರತ ಮೂಲದ ಸುಧಾಮೂರ್ತಿಯವರ ಅಳಿಯ ರಿಷಿ ಸುನಕ್ ಅವರನ್ನು ಸೋಲಿಸಿ ಬ್ರಿಟನ್ ನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಸೋಮವಾರ ಚುನಾವಣೆ ಅಂತಿಮ ಫಲಿತಾಂಶ ಪ್ರಕಟವಾಗಿದ್ದು  ಯುನೈಟೆಡ್ ಕಿಂಗ್‌ಡಮ್‌ನ ಮುಂದಿನ ಪ್ರಧಾನ ಮಂತ್ರಿ ಲಿಜ್ ಟ್ರಸ್ ಎಂದು ಘೋಷಿಸಲಾಯಿತು. ಈ ಮೂಲಕ ಕಳೆದೊಂದು ತಿಂಗಳಿಗೂ ಹೆಚ್ಚು ಕಾಲ ಬ್ರಿಟನ್ ನಲ್ಲಿ ನಡೆದ ಪೊಲಿಟಿಕಲ್ ಹೈಡ್ರಾಮಾಗೆ ತೆರೆ ಬಿದ್ದಿದೆ.

ಕನ್ಸರ್ವೇಟಿವ್ ಪಕ್ಷದ ನಾಯಕನನ್ನು ಆಯ್ಕೆ ಮಾಡುವ ಚುನಾವಣೆಯಲ್ಲಿ ಲಿಜ್  ಟ್ರಸ್ 81,326 ಮತಗಳನ್ನು ಗಳಿಸಿದ್ದು,  ರಿಷಿ ಸುನಕ್ ಅವರು 60,399 ಮತಗಳನ್ನು ಗಳಿಸಿದ್ದಾರೆ.

ವಿಜೇತರನ್ನು 12:30 BST (17:00 IST) ಕ್ಕೆ ಸರ್ ಗ್ರಹಾಂ ಬ್ರಾಡಿ ಘೋಷಿಸಿದರು. ಲಿಜ್ ಟ್ರಸ್  ತಮ್ಮ ವಿಜಯದ ಭಾಷಣದಲ್ಲಿ, ತನ್ನ ಪ್ರತಿಸ್ಪರ್ಧಿ ಸುನಕ್ ಒಡ್ಡಿದ ಸವಾಲನ್ನು ಒಪ್ಪಿಕೊಂಡರು. ಇದು ಕಠಿಣ ಹೋರಾಟದ ಪ್ರಚಾರವಾಗಿದೆ. ನಮ್ಮ ಕನ್ಸರ್ವೇಟಿವ್ ಪಕ್ಷದಲ್ಲಿ ನಾವು ಪ್ರತಿಭೆಯ ಆಳ ಮತ್ತು ಅಗಲವನ್ನು ತೋರಿಸಿದ್ದೇವೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದರು.

ಬೋರಿಸ್ ಜಾನ್ಸನ್ ನಂತರ ಲಿಜ್ ಟ್ರಸ್  ಪ್ರಧಾನಿ ಹುದ್ದೆಗೇರಲಿದ್ದಾರೆ. ಮಾರ್ಗರೆಟ್ ಥ್ಯಾಚರ್ ಮತ್ತು ಥೆರೆಸಾ ಮೇ ನಂತರ ಟ್ರಸ್ ಅವರು ಬ್ರಿಟನ್‌ನಲ್ಲಿ ಮೂರನೇ ಮಹಿಳಾ ಪ್ರಧಾನ ಮಂತ್ರಿಯಾಗಿದ್ದಾರೆ.

ಸುದ್ದಿ ಓದಿ