ರಬಾಕಾವಿಬನಹಟ್ಟಿ

ಸಾಹಿತ್ಯ ಮತ್ತು ಸಂಗೀತ ಒಂದೇ ನಾಣ್ಯದ ಎರಡು ಮುಖಗಳು

ಸಾಹಿತ್ಯ ಮತ್ತು ಸಂಗೀತ ಒಂದೇ ನಾಣ್ಯದ ಎರಡು ಮುಖಗಳು

ರಬಕವಿ-ಬನಹಟ್ಟಿ 16: ಸಂಗೀತದಲ್ಲಿ ಒಲವು ಇರಬೇಕು. ಸಂಗೀತ ಅರಿಯಲು ಗುರುಗಳ ಮಾರ್ಗದರ್ಶನ ಅಗತ್ಯ. ಸಮುದ್ರದ ಅಲೆಗಳ ತೀವ್ರತೆ ಶಾಂತ ಮಾಡುವ ಶಕ್ತಿ ಸಂಗೀತಕ್ಕಿದೆ ಎಂದು ಸಾಹಿತಿ, ಪತ್ರಕರ್ತ ಯಶವಂತ ವಾಜಂತ್ರಿ ಹೇಳಿದರು.  

 ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಬಾಗಲಕೋಟೆ, ತಾಲೂಕು ಘಟಕ ರಬಕವಿ-ಬನಹಟ್ಟಿ, ವಲಯಗಳು ತೇರದಾಳ ಮಹಾಲಿಂಗಪುರ, ವಿದ್ಯಾ ಮಹಿಳಾ ಮಂಡಳ, ಕಲಾ ಸಂಗಮ ರಬಕವಿ ಇವರ ಸಹಯೋಗದಲ್ಲಿ ರಬಕವಿ ವಿದ್ಯಾನಗರದ ಕಾಳಮ್ಮ ದೇವಸ್ಥಾನದಲ್ಲಿ ಹಮ್ಮಿಕೊಂಡಿರುವ ಗೀತ ಗಾಯನ ಶಿಬಿರ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ಸಾಹಿತ್ಯ ಮತ್ತು ಸಂಗೀತ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ರೋಗಗಳನ್ನು ಗುಣಪಡಿಸುವ ಶಕ್ತಿ ಸಂಗೀತಕ್ಕಿದೆ ಎಂದರು. 

 ಜಮಖಂಡಿ ತುಂಗಳ ಕಾಲೇಜಿನ ಸಂಗೀತ ಶಿಕ್ಷಕರಾದ ಶಿವಲೀಲಾ ಲಕ್ಕನಗೌಡರ ಹಾರ್ಮೋನಿಯಂ ನುಡಿಸುವ ಮೂಲಕ ಶಿಬಿರ ಉದ್ಘಾಟಿಸಿ ಸಂಗೀತಕ್ಕೆ ಅಪಾರ ಶಕ್ತಿ ಇದೆ. ಮನವಿಟ್ಟು, ಶ್ರಮಪಟ್ಟು ಸಂಗೀತ ಕಲಿಯಬೇಕು ಎಂದರು.ರಾಮಪುರ ಶ್ರೀ ಶಿವಾನಂದ ಕುಟೀರದ ಶಿವಾನಂದ ಭಸ್ಮೆ ಮಹಾರಾಜರು ಅಧ್ಯಕ್ಷತೆ ವಹಿಸಿ ಪ್ರತಿಯೊಬ್ಬರೂ ಸಂಗೀತದ ಹವ್ಯಾಸ ಬೆಳೆಸಿಕೊಳ್ಳಬೇಕು. ಭಾವ ತುಂಬಿ ಹಾಡಿದರೆ ಭಗವಂತನು ಒಲಿಯುತ್ತಾನೆ. ಸಂಗೀತದಲ್ಲಿ ಅದ್ಭುತ ಶಕ್ತಿ ಇದ್ದು, ಶಿಬಿರಾರ್ಥಿಗಳು ಈ ಶಿಬಿರದ ಲಾಭ ಪಡೆಯಲು ತಿಳಿಸಿದರು. 

 ಕಸಾಪ ರಬಕವಿ-ಬನಹಟ್ಟಿ ತಾಲೂಕು ಅಧ್ಯಕ್ಷ ಮ.ಕೃ.ಮೇಗಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಹಿತ್ಯ ಮತ್ತು ಸಂಗೀತದ ಮಹತ್ವ ಅರಿಯಲು, ಪುಸ್ತಕಾವಲೋಕನ ಮೂಲಕ ಮನೆಮನೆಗೆ ಸಾಹಿತ್ಯ ತಲುಪಿಸುವ ಕೆಲಸವನ್ನು ಪರಿಷತ್ತು ಮಾಡುತ್ತಿದೆ ಎಂದರು. ಈ ಕಾರ್ಯಕ್ರಮಗಳ ಯಶಸ್ವಿಗೆ ಎಲ್ಲರ ಸಹಕಾರ, ಹಿರಿಯರ ಮಾರ್ಗದರ್ಶನ ದೊರೆಯುತ್ತಿದೆ ಎಂದರು. 

 ಕಲಾ ಸಂಗಮದ ಡಾ. ಬಿ.ಎನ್‌. ಬಾಗಲಕೋಟ ಭಕ್ತಿಗೀತೆ ಹಾಡಿದರು. ಕಾಳಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಗಣಪತಿ ಸುತಾರ,ವಿದ್ಯಾ ಮಹಿಳಾ ಮಂಡಳ ಅಧ್ಯಕ್ಷೆ ಅಕ್ಕಮಹಾದೇವಿ ಹ್ಯಾವಿನ್, ಕಲಾ ಸಂಗಮ ಕೋಶಾಧ್ಯಕ್ಷ ಪ್ರಕಾಶ ವಜ್ರಮಟ್ಟಿ ಮಾತನಾಡಿದರು. ಶಿಕ್ಷಕಿ ಸುಜಾತಾ ಗೌಡರ ಪ್ರಾರ್ಥಿಸಿದರು. ಕಸಾಪ ಗೌರವ ಕಾರ್ಯದರ್ಶಿ ಶ್ರೀಶೈಲ ಬುರ್ಲಿ, ಜ್ಯೋತಿ ಹ್ಯಾವಿನ್ ನಿರೂಪಿಸಿದರು. ರಾಜೇಶ್ವರಿ ಗಂಗಾಧರ ಬಿಲವಡಿ ವಂದಿಸಿದರು. ಸಂಗೀತ ಶಿಕ್ಷಕರಾದ ಸುಭಾಸ ಪಾಟೀಲ, ವೈ.ಸಿ. ಇಮಡೆನ್ನವರ ಶಿಬಿರ ಗೀತೆ, ಭಕ್ತಿಗೀತೆ, ಜಾನಪದ ಗೀತೆ ಹೇಳಿಕೊಟ್ಟರು. ವಿಶ್ವನಾಥ ಬಾಗಲಕೋಟ ತಬಲಾ ಸಾಥ್ ನೀಡಿದರು.ಕಸಾಪ ಮಾಜಿ ಅಧ್ಯಕ್ಷ ರಾಮಣ್ಣ ಕೊಣ್ಣೂರ, ಕಸಾಪ ತಾಲೂಕು ಪದಾಧಿಕಾರಿ ಮಹಾಶಾಂತ ಶೆಟ್ಟಿ, ಸರ್ವಮಂಗಳಾ ಹಿರೇಮಠ, ವೀಣಾ ಪತ್ತಾರ, ಮಹಾದೇವಿ ನಾಶಿ, ಗಂಗಾಧರ ಬಿಲವಡಿ, ಪ್ರಕಾಶ ಚಲವಾದಿ ಸೇರಿದಂತೆ 42 ಶಿಬಿರಾರ್ಥಿಗಳು ಭಾಗವಹಿಸಿದ್ದರು. 


ಸುದ್ದಿ ಓದಿ