ಪದ್ಮಶ್ರೀ ದಿ. ಇಬ್ರಾಹಿಂ ಸುತಾರ್ ಸ್ಮಾರಕವನ್ನು ನಿರ್ಮಿಸಲು ಒತ್ತಾಯಿಸಿ ಸಿಎಂಗೆ ಪತ್ರ
ಮಹಾಲಿಂಗಪುರ18 : ಕನ್ನಡ ನಾಡು ಕಂಡ ಸೌಹಾರ್ದ ನೆಲೆಗಟ್ಟಿನ ಪ್ರವಚನಕಾರ ಅಪ್ರತಿಮ ಪದ್ಮಶ್ರೀ ದಿವಂಗತ ಇಬ್ರಾಹಿಂ ಸುತಾರ್ ಅವರ ನಿವಾಸ ಭಾವೈಕ್ಯ ಪಕ್ಕದಲ್ಲಿರುವ ಖಾಲಿ ನಿವೇಶನದಲ್ಲಿ ಅವರ ಸ್ಮಾರಕವನ್ನು ನಿರ್ಮಿಸಬೇಕೆಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಹಿಂದೂ ಧರ್ಮದ ಭಗವದ್ಗೀತೆ, ಬಸವಣ್ಣನವರ ವಚನ ಸಾಹಿತ್ಯದ ಸಾರ, ಕುರಾನ್, ಬೈಬಲ್, ಬುದ್ಧ ಇನ್ನೀತರ ಧರ್ಮ ಗ್ರಂಥಗಳನ್ನು ಅಭ್ಯಸಿಸಿ ಎಲ್ಲ ಸಮುದಾಯಗಳಲ್ಲಿ ಪರಸ್ಪರ ಭಾವೈಕ್ಯತೆ ಬೆಸೆಯುವ ರೀತಿಯಲ್ಲಿ ಅಪಾರವಾಗಿ ಶ್ರಮಿಸಿದ್ದಾರೆ.
ಭಾವೈಕ್ಯತೆಯ ಹರಿಕಾರರಾಗಿ ಭಜನೆ ಪದಗಳು, ವಚನ ಸಾಹಿತ್ಯವಲ್ಲದೆ ದೃಷ್ಟಾಂತಗಳನ್ನೂ ಸಹಿತ ಸಂವಾದ ರೂಪದಲ್ಲಿ ಜನ ಸಾಮಾನ್ಯರೊಂದಿಗೆ ಹಂಚಿಕೊಂಡು ಆಧ್ಯಾತ್ಮದ ರುಚಿಯನ್ನು ಮತ್ತಷ್ಟು ಹೆಚ್ಚಿಸಿದ್ದರು. ಪ್ರಸ್ತುತ ಪಟ್ಟಭದ್ರ ಹಿತಾಸಕ್ತಿಗಳಿಂದ ಆಗಿರುವ ಜಾತಿ ವೈಷಮ್ಯದಿಂದ ದೂರಾಗಿರುವ ಮನಸ್ಸುಗಳ ಕೂಡಿಸುವ ಸಮಾನತೆಯ ಭೋಧನೆ ಮಾಡಿದ್ದಾರೆ.
ನೂರಾರು ನದಿಗಳು ಸಮುದ್ರವನ್ನು ಸೇರುವಂತೆ ಮನುಕುಲವೂ ಹಲವಾರು ನಾಮಗಳಿಂದ ಕರೆಯಿಸಿಕೊಳ್ಳುವ ಆ ಪರಮಾತ್ಮನನ್ನೇ ಸೇರುತ್ತವೆ ಎಂದು ಬೋಧಿಸುತ್ತಾ ಇಹಲೋಕದ ಪಾತ್ರವನ್ನು ಮುಗಿಸಿ ಹೋಗಿದ್ದಾರೆ. ಆದರೆ ಅವರು ಬಿಟ್ಟು ಹೋದ ನೈಜ ಆಧ್ಯಾತ್ಮದ ದಿಟ್ಟ ಸೈದ್ಧಾಂತಿಕ ನಿಲುವುಗಳು ಇಂದಿಗೂ ಜನಮಾನಸದಲ್ಲಿ ಅಜರಾಮರವಾಗಿವೆ.
ಈ ಕಾರಣದಿಂದ ಅವರ ಆಶೆಯಂತೆ ಮಹಾಲಿಂಗಪುರ ಪಟ್ಟಣದಲ್ಲಿ ಸಮನ್ವಯಕಾರನ ಕನಸಿನ ಸರ್ವಧರ್ಮ ಗ್ರಂಥಾಲಯ ಮತ್ತು ಈಗ ಲಭ್ಯವಿರುವ ಭಾವೈಕ್ಯ ನಿವಾಸ ಮುಂದಿನ ಪೀಳಿಗೆಗೆ ಆಧ್ಯಾತ್ಮದ ರಹದಾರಿಗೆ ದಾರಿ ದೀಪವಾಗಲು ಸ್ಮಾರಕ ನಿರ್ಮಾಣವಾಗಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪತ್ರದ ಮುಖಾಂತರ ಸಚಿವ ಕಾರಜೋಳರು ಒತ್ತಾಯಿಸಿದ್ದಾರೆ. ಈ ಕ್ರಮಕ್ಕೆ ಪಟ್ಟಣದ ಜನತೆ ಹರ್ಷ ವ್ಯಕ್ತಪಡಿಸಿ ಗೋವಿಂದ ಕಾರಜೋಳ ರವರನ್ನು ಅಭಿನಂದಿಸಿ ಕಾರ್ಯ ಬೇಗ ಕೈಗೂಡಲಿ ಎಂದು ಹರಸಿದ್ದಾರೆ.