ಕುಡಚಿ-ಬಾಗಲಕೋಟ ರೈಲು ಕಾಮಗಾರಿ ವಿಳಂಬ ನೀತಿ ವಿರೋಧಿಸಿ ಪತ್ರ ಚಳವಳಿ
ಮಹಾಲಿಂಗಪುರ 15: ಕುಡಚಿ-ಬಾಗಲಕೋಟ ರೈಲು ಕಾಮಗಾರಿಯ ವಿಳಂಬ ಖಂಡಿಸಿ ಹಾಗೂ ಸಂಸದ ಪಿ.ಸಿ.ಗದ್ದಿಗೌಡರ ನಿರ್ಲಕ್ಷ ಧೋರಣೆ ವಿರೋಧಿಸಿ, ಗುರುವಾರ ಬೆಳಗ್ಗೆ 10 ಗಂಟೆಗೆ ಸ್ಥಳೀಯ ರಾಣಿ ಚೆನ್ನಮ್ಮ ವೃತ್ತದಲ್ಲಿ ಪತ್ರ ಚಳುವಳಿ ನಡೆಸಲಾಗುವುದು ಎಂದು ಬಾಗಲಕೋಟ ಕುಡಚಿ ರೈಲ್ವೇ ಹೋರಾಟ ಸಮಿತಿಯ ಅಧ್ಯಕ್ಷ ಕುತುಬುದ್ದಿನ್ ಖಾಜಿ ತಿಳಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳೇ ಆಡಳಿತದಲ್ಲಿದ್ದರೂ ಸಾರ್ವಜನಿಕ ಹಿತಾಸಕ್ತಿಯ ಕೊರತೆ ಹಾಗೂ ಕೇಂದ್ರ ಸರ್ಕಾರದ ಕೆಲ ತಪ್ಪು ನಿರ್ಧಾರಗಳಿಂದ, ಈ ಭಾಗದ ಪೂರ್ವ-ಪಶ್ಚಿಮ ಸೇತುವೆಯಂತಿರುವ ಶತಮಾನದ ಕನಸು ಕುಡಚಿ ಮತ್ತು ಬಾಗಲಕೋಟ ರೈಲು ಸಂಪರ್ಕ ಕಾಲು ಭಾಗ ಮಾತ್ರ ಪೂರ್ಣಗೊಂಡು ಉಳಿದ ಕಾಮಗಾರಿ ಪ್ರಗತಿ ಕಾಣದೆ ಈ ಭಾಗದ ಜನರಿಗೆ ರೈಲ್ವೆ ಸೌಲಭ್ಯ ಮರೀಚಿಕೆಯಂತಾಗಿದೆ. ಇದರಿಂದ ರೈಲ್ವೆ ಹೋರಾಟ ಸಮಿತಿಯ ಸದಸ್ಯರು, ರೈತರು, ಕಾರ್ಮಿಕರು ಒಟ್ಟಾರೆ ಎಲ್ಲ ಸಾರ್ವಜನಿಕರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಲು ಒತ್ತಾಯಿಸಿ ಇಂದು ಬೀದಿಗಿಳಿಯಲಿದ್ದಾರೆ ಎಂದರು.
ಈಗಾಗಲೇ ಖರ್ಚು ಮಾಡಿರುವ ಹಾಗೂ ಪ್ರಸ್ತುತ ದರ ಏರಿಕೆಯಿಂದ ಸಾರ್ವಜನಿಕರ ಸಾವಿರಾರು ಕೋಟಿ ಹಣ ವಿಳಂಬ ಕಾರಣದಿಂದ ಪೋಲಾಗುತ್ತಿದ್ದು, ಇದೇ ರೀತಿ ವಿಳಂಬ ನೀತಿ ಮುಂದುವರೆದರೆ ಇಡೀ ಯೋಜನೆ ದಾರಿ ತಪ್ಪಿದಂತಾಗುತ್ತದೆ. ಆದ್ದರಿಂದ ಕೂಡಲೇ ಕಾಮಗಾರಿ ಆರಂಭಿಸಿ ಪೂರ್ಣಗೊಳಿಸಬೇಕೆಂದು ಕೇಂದ್ರ ಸರಕಾರವನ್ನು ಪತ್ರ ಚಳುವಳಿಯ ಮೂಲಕ ಒತ್ತಾಯಿಸಲಾಗುತ್ತದೆ ಆದ್ದರಿಂದ ಈ ಭಾಗದ ರೈತರು, ಕಾರ್ಮಿಕರು, ಪ್ರಗತಿಪರರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಿದರು.