ಮಹಲಿಂಗಪುರ

ಮಕ್ಕಳ ಹಕ್ಕು ಮತ್ತು ರಕ್ಷಣೆಯ ಬಗ್ಗೆ ಪ್ರತಿ ನಾಗರಿಕನಿಗೆ ಅರಿವಿರಲಿ : ಸಿಂದಗಿ

ಮಕ್ಕಳ ಹಕ್ಕು ಮತ್ತು ರಕ್ಷಣೆಯ ಬಗ್ಗೆ ಪ್ರತಿ ನಾಗರಿಕನಿಗೆ ಅರಿವಿರಲಿ : ಸಿಂದಗಿ

ಮಹಾಲಿಂಗಪುರ : ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿರ್ದೇಶನದಂತೆ ಕೆಲಸದಲ್ಲಿ ತೊಡಗಿರುವ ಬಾಲ ಹಾಗೂ ಕಿಶೋರ ಕಾರ್ಮಿಕರನ್ನು ರಕ್ಷಿಸಿ ಪುನರ್ವಸತಿಗೊಳಿಸಿ ಶಿಕ್ಷಣ ಮುಂದುವರಿಕೆಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಹಲವಾರು ಇಲಾಖೆಗಳ ಮುಖ್ಯಸ್ಥರ ಸಹಯೋಗದಲ್ಲಿ ಇಂದು ಮಹಾಲಿಂಗಪುರದ ವಿವಿಧೆಡೆ ಪರೀಶೀಲನೆ ಮಾಡಲಾಯಿತು ಎಂದು ಕಾರ್ಮಿಕ ನೀರೀಕ್ಷಕ ರಮೇಶ ಸಿಂಧಗಿ ಹೇಳಿದರು. 

ಸ್ಥಳೀಯ ಚನ್ನಮ್ಮ ವೃತ್ತದಲ್ಲಿರುವ ಪಲ್ಲವಿ ಹೋಟೆಲ್‌ಗೆ ತಂಡದೊಂದಿಗೆ ಭೇಟಿ ನೀಡಿ ಪರೀಶೀಲಿಸಿ ಮಾತನಾಡಿದ ಅವರು, ಬಾಲಕಾರ್ಮಿಕರ ರಕ್ಷಣೆ ಹಾಗೂ ಪುನರ್ವಸತಿ ಹಾಗೂ ಶಿಕ್ಷಣ ಕಾರ್ಯಾಚರಣೆ ಮತ್ತು ಜಾಗೃತಿ ಕಾರ್ಯಕ್ರಮ ಡಿ. 10 ರ ವರೆಗೆ ರಾಷ್ಟ್ರವ್ಯಾಪಿ ಜರುಗುತ್ತಿದ್ದು ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ 1986 ತಿದ್ದುಪಡಿ ಕಾಯ್ದೆ 2016 ರಂತೆ 14 ವರ್ಷದೊಳಗಿನ ಮಕ್ಕಳನ್ನು ಯಾವುದೇ ಕ್ಷೇತ್ರಗಳಲ್ಲಿ ದುಡಿಸಿಕೊಳ್ಳುವುದು ಅಪರಾಧ ಹಾಗೂ 18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕ್ಷೇತ್ರಗಳಲ್ಲಿ ದುಡಿಸಿಕೊಳ್ಳುವುದನ್ನು ನಿಷೇಧಿಸಿದೆ. ಈ ಅಪರಾಧಗಳಿಗೆ 6 ತಿಂಗಳಿಂದ 2 ವರ್ಷಗಳ ಜೈಲು ಶಿಕ್ಷೆ 20 ರಿಂದ 50 ಸಾವಿದವರೆಗೆ ದಂಡ ವಿಧಿಸಲು ಅವಕಾಶವಿದ್ದು ಎಫ್‌ಐಆರ್ ಸಹ ದಾಖಲಿಸಲಾಗುವುದು. 

ದೇಶದ ಎಲ್ಲಾ ಮಕ್ಕಳಿಗೂ ಉಚಿತ ಪ್ರಾಥಮಿಕ ಶಿಕ್ಷಣ ಕಡ್ಡಾಯ, ಹೆಣ್ಣು ಮಕ್ಕಳ ಕಲಿಕೆಗೆ ವಿಶೇಷ ಒತ್ತು ನೀಡಲಾಗಿದೆ. ಬಾಲ ನ್ಯಾಯ ಆರೋಗ್ಯ ಮತ್ತು ರಕ್ಷಣೆ ಕಾಯ್ದೆ 2015 ರನ್ವಯ ಮಕ್ಕಳಿಗೆ ಶಿಕ್ಷಣ ಮತ್ತು ರಕ್ಷಣೆ ಕೊಡಲೇಬೇಕು. ಮಕ್ಕಳು ಇದರಿಂದ ವಂಚಿತರಾದಲ್ಲಿ ಸಂಬಂಧಿತ ಇಲಾಖೆಗಳಿಂದ ಅಥವಾ ಮಕ್ಕಳ ಕಲ್ಯಾಣ ಸಮಿತಿಯ ಮೂಲಕ ಪರಿಹಾರ ಒದಗಿಸಲಾಗುವುದು, ದೇಶದ ಪ್ರತಿ ನಾಗರಿಕನೂ ಇದನ್ನು ತಿಳಿದಿರಬೇಕೆಂದರು.  

ಯೋಜನಾ ನಿದೇಶಕ ಸುಧಾಕರ ಬಡಿಗೇರ, ಮುಖ್ಯಶಿಕ್ಷಕ ಕೆ.ಎಸ್‌.ಹಿರೇಮಠ, ಹವಾಲ್ದಾರ್ ಜಗದೀಶ ಪಾಟೀಲ, ದಫೆದಾರ ಎಚ್‌.ಕೆ.ಮಾಂಗ, ಯಶ್ವಂತ ಮಾದರ, ವೀರೇಶ ಜಿಗೇರಿ ತಂಡದಲ್ಲಿದ್ದರು. 

 


ಸುದ್ದಿ ಓದಿ