ಅನೈತಿಕ ಚಟುವಟಿಕೆಗಳ ತಾಣವಾಗಿರುವ ಕೌಜಲಗಿ ನಿಂಗಮ್ಮ ರಂಗ ಮಂದಿರ

ಅಧಿಕಾರಿಗಳ ಎಡಬಿಡಂಗಿತನ ಕಾರಣ: ಜಿ.ಎಸ್.ಗೊಂಬಿ ಅಭಿಮತ
ವರದಿ:ಹನಮಂತ ಪಿ ನಾವಿ
ಮಹಾಲಿಂಗಪುರ 18: ಪರಿಜಾತ ಕಲೆಯಿಂದ ಕನ್ನಡದ ಕಲಾ ಸಂಸ್ಕೃತಿಗೆ ವಿಶ್ವ ಮಾನ್ಯತೆ ದೊರಕಿಸಿಕೊಟ್ಟ ಉತ್ತರ ಕರ್ನಾಟಕದ ಕಲಾವಿದೆಣಟಿಜಜಜಿಟಿಜಜ ಕೌಜಲಗಿ ನಿಂಗಮ್ಮನವರ ಹೆಸರಿನಲ್ಲಿ ನಿರ್ಮಾಣಗೊಂಡ ರಂಗ ಮಂದಿರ ಈಗ ಅಧಿಕಾರಿಗಳ ಎಡಬಿಡಂಗಿತನದಿಂದ ಅನೈತಿಕ ಚಟುವಟಿಕೆಗಳ ತಾಣವಾಗಿ ಕುಡುಕರು ಮತ್ತು ಜೂಜುಕೋರರ ಕತ್ತಲ ಸಾಮ್ರಾಜ್ಯವಾಗಿದೆ.ಭವನದ ನಿರ್ವಹಣೆಗೆ ಯಾವುದೇ ಸಿಬ್ಬಂದಿ ಇಲ್ಲದೆ, ಕಾವಲುಗಾರರಿಲ್ಲದೆ ಪುಂಡರ ಪುಂಡತನಕ್ಕೆ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ. ಕಾಂಪೌಂಡ್ ಇಲ್ಲದ ಕಾರಣ ರಾತ್ರಿ ಸಮಯದಲ್ಲಿ ಪುಂಡರ ಹಾವಳಿ ಮತ್ತು ಎಲ್ಲೆಂದರಲ್ಲಿ ಬಿಸಾಡುವ ಬಾಟಲಿಗಳು ಮಲ ಮೂತ್ರ ವಿಸರ್ಜನೆ ಮತ್ತು ಉಗುಳುವಿಕೆಯಿಂದಾಗಿ ವಾತಾವರಣ ಅಸಹ್ಯವೆನಿಸುತ್ತಿದೆ. ಸುಮಾರು ತಿಂಗಳುಗಳಿಂದ ಯಾವುದೇ ಕಾರ್ಯಕ್ರಮಗಳು ನಡೆಯುತ್ತಿಲ್ಲ.ನಾಮಫಲಕ ಪುಡಿ ಪುಡಿ :ರಾತ್ರಿ ಬರುವ ಪುಂಡರು ಅಕ್ರಮ ಚಟುವಟಿಕೆಗಳನ್ನು ನಡೆಸುವುದರೊಂದಿಗೆ ಭವನಕ್ಕೆ ಅಳವಡಿಸಲಾಗಿದ್ದ ಅತ್ಯಂತ ಬೆಲೆಬಾಳುವ ಮತ್ತು ಸುಂದರ ನಾಮಫಲಕವನ್ನು ಪುಡಿ ಪುಡಿ ಮಾಡಿದ್ದಾರೆ. ಭವನದ ಸುತ್ತಲೂ ಆವರಿಸಿರುವ ಮುಳ್ಳುಕಂಠಿಗಳು, ಗಿಡಗಂಟಿಗಳಿಂದ ಅಪಾಯಕಾರಿ ಭಯಾನಕ ವಾತಾವರಣ ನಿರ್ಮಾಣಗೊಂಡಿದೆ.ಮಾಜಿ ಸಚಿವೆ ಉಮಾಶ್ರೀ ಅವರ ಕಲಾ ಪ್ರೀತಿಯಿಂದಾಗಿ ಎರಡು ಹಂತದಲ್ಲಿ ಸು. 3.20 ಕೋಟಿ ಅನುದಾನದಲ್ಲಿ ನಿರ್ಮಾಣಗೊಂಡ ಭವನದ ಸು. 20 ಲಕ್ಷ ವೆಚ್ಚದ ಜನರೇಟರ್ ಯಾವುದೇ ರಕ್ಷಣೆ ಇಲ್ಲದೆ ಮುಳ್ಳುಕಂಠಿಗಳಲ್ಲಿ ಅನಾಥವಾಗಿ ಬಿದ್ದಿದೆ, ವಿದ್ಯುತ್ ಬಿಲ್ ಪಾವತಿಸದೆ ವಿದ್ಯುತ್ ಸಂಪರ್ಕ ಕಡಿತಗೊಂಡು ಕಲಾಮಂದಿರಕ್ಕಾಗಿಯೇ ಹಾಕಲಾಗಿದ್ದ ವಿದ್ಯುತ್ ಪರಿವರ್ತಕ ನಿಷ್ಪ್ರಯೋಜಕವಾಗಿದೆ. ಮುಚ್ಚಳವಿಲ್ಲದ ನೀರಿನ ಸಂಪು ಆಹುತಿಗಾಗಿ ಬಾಯ್ದೆರೆದು ಕುಳಿತಿದೆ.ಇದೇ ಆವರಣದಲ್ಲಿ ಮೆಟ್ರಿಕ್ ಪೂರ್ವ ವಸತಿ ನಿಲಯ, ಪದವಿಪೂರ್ವ ಕಾಲೇಜು, ಪ್ರೌಢಶಾಲೆಗಳೂ ಕಾರ್ಯನಿರ್ವಹಿಸುತ್ತಿದ್ದು ಸಾವಿರಾರು ವಿದ್ಯಾರ್ಥಿಗಳು ಓಡಾಡುವ ಈ ಜಾಗದಲ್ಲಿರುವ ಅಪಾಯಕಾರಿ ನೀರಿನ ಸಂಪು ಯಾರನ್ನು ಯಾವಾಗ ಬಲಿತೆಗೆದುಕೊಳ್ಳುವುದೋ ಎಂಬ ಭೀತಿ ಸದಾ ಕಾಡುತ್ತಿದೆ. ಶಾಸಕ ಸಿದ್ದು ಸವದಿಯವರು ಇತ್ತೀಚಿಗೆ ನೀಡಿದ ಅನುದಾನ 25 ಲಕ್ಷ ರೂ. ಪಡೆಯಲೂ ಸಹ ಅಧಿಕಾರಿಗಳು ವಿಫಲರಾಗಿದ್ದು, ಕೇಂದ್ರ ಕಚೇರಿ ಕೇಳಿದ ಅನುದಾನ ಬಳಕೆ ಪ್ರಮಾಣ ಪತ್ರ ನೀಡದೆ ಶಾಸಕರು ನೀಡಿರುವ 25 ಲಕ್ಷ ಸದ್ಬಳಕೆಗೂ ಎಳ್ಳು ನೀರು ಬಿಟ್ಟಿದ್ದಾರೆ, ಲೋಕೋಪಯೋಗಿ ಇಲಾಖೆ, ಭೂಸೆನಾ ನಿಗಮ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಹಗ್ಗ ಜಗ್ಗಾಟದಲ್ಲಿ ಕಲಾವಿದರ ಕನಸಿಗೆ ಪಂಗ ನಾಮ ಹಾಕಲಾಗಿದೆ.
ವೇದಿಕೆಗೆ ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲ, ಅರಚಿಕೊಳ್ಳುವ ಸೌಂಡ್ ಸಿಸ್ಟಮ್, ಆರ್ಭಟಿಸುತ್ತಿರುವ ಫ್ಯಾನುಗಳು, 300 ಜನ ಪ್ರೇಕ್ಷಕರು ಕೂಡಬಹುದಾದ ಸಭಾಂಗಣದಲ್ಲಿ ಕೇವಲ 120 ಆಸನಗಳನ್ನು ಹಾಕಿ ಕೈ ತೊಳೆದುಕೊಳ್ಳಲಾಗಿತ್ತು. ಸಾರ್ವಜನಿಕರ ಹಿತಾಸಕ್ತಿ ಮತ್ತು ಶಾಸಕ ಸಿದ್ದು ಸವದಿ ಅವರಕಾಳಜಿಯಿಂದಾಗಿ ಮತ್ತೆ ಸೌಂಡ್ ಸಿಸ್ಟಮ್, ಆಸನಗಳನ್ನು ಬದಲಾಯಿಸಿತಾದರೂ ಕಲಾಭಿಮಾನಿಗಳ ಮತ್ತು ಕಲಾವಂತರ ಆಸೆಗೆ ಸಂಪೂರ್ಣ ತಣ್ಣೀರೆರಚಲಾಗಿದೆ .
- ಜಿ.ಎಸ್.ಗೊಂಬಿ, ಪುರಸಭಾ ಮಾಜಿ ಅಧ್ಯಕ್ಷ
ನಾವು ಎಚ್ಚರಿಕೆ ಕೊಟ್ಟ ಬಳಿಕ ಪುಂಡರ ಹಾವಳಿ ತಗ್ಗಿದೆಯಾದರೂ ಪೂರ್ಣ ಪ್ರಮಾಣದಲ್ಲಿ ನಿಂತಿಲ್ಲ. ಅಧಿಕಾರಿಗಳು ಮತ್ತು ಪೋಲಿಸರು ಗಮನ ಹರಿಸಬೇಕು
- ಶೇಖರ ಅಂಗಡಿ, ಪುರಸಭಾ ಸದಸ್ಯ
ನಾನು ಈಗಾಗಲೇ 25 ಲಕ್ಷ ಅನುದಾನವನ್ನು ಕೊಟ್ಟಿದ್ದರೂ ಅದರ ಸದ್ಬಳಕೆಯ ನಿಟ್ಟಿನಲ್ಲಿ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ. ಇರುವ ತಾಂತ್ರಿಕ ತೊಂದರೆಗಳನ್ನು ಆದಷ್ಟು ಬೇಗ ಪರಿಹರಿಸಿಕೊಂಡು ಭವನದ ಅಭಿವೃದ್ಧಿಗೆ ಶ್ರಮಿಸಲಿ,ಇನ್ನೂ ಹೆಚ್ಚಿನ ಅನುದಾನ ನೀಡಲು ಸಿದ್ಧನಿದ್ದೇನೆ.
- ಸಿದ್ದು ಸವದಿ, ಶಾಸಕ