ಮಹಲಿಂಗಪುರ

ತಾಲೂಕು ಹೋರಾಟಕ್ಕೆ ಕೋಡಿಹಳ್ಳಿ ಚಂದ್ರಶೇಖರ್ ಬೆಂಬಲ

ತಾಲೂಕು ಹೋರಾಟಕ್ಕೆ ಕೋಡಿಹಳ್ಳಿ ಚಂದ್ರಶೇಖರ್ ಬೆಂಬಲ

ಲೋಕದರ್ಶನ ವರದಿ 

ಮಹಾಲಿಂಗಪುರ 13:  1464 ದಿನಗಳಿಂದ ನಡೆದಿರುವ ಮಹಾಲಿಂಗಪುರ ನೂತನ ತಾಲೂಕಿಗಾಗಿ ನಡೆದಿರುವ ಹೋರಾಟ ವೇದಿಕೆಗೆ ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು ರವಿವಾರ ಭೇಟಿ ನೀಡಿ ಹೋರಾಟಗಾರರ ಬೇಡಿಕೆ ಆಲಿಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. 

ಹೋರಾಟಗಾರರನ್ನು ಕುರಿತು ಮಾತನಾಡಿದ ಅವರು, ಮಹಾಲಿಂಗಪುರ ಪಟ್ಟಣ ಮತ್ತು ಸುತ್ತಮುತ್ತ ಇರುವ ಪ್ರದೇಶವನ್ನು ದಶಕಗಳಿಂದ ಅವಲೋಕಿಸುತ್ತಾ ಬಂದಿದ್ದೇನೆ. ಈ ಭಾಗದಲ್ಲಿ ಮಹಾಲಿಂಗಪುರ ಪಟ್ಟಣ ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಅಷ್ಟೇ ಅಲ್ಲದೆ ನೂತನ ತಾಲೂಕಿಗೆ ಅಗತ್ಯವಾಗಿರುವ ಜನಸಂಖ್ಯೆಯನ್ನು ಕೂಡ ಹೊಂದಿರುವ ಪಟ್ಟಣ.  

ನಿಯೋಜಿತ ನೂತನ ತಾಲೂಕಿಗೆ ಬೇಕಾಗಿರುವ ಒಂಬತ್ತು ಹಳ್ಳಿಗಳು ಕೃಷಿ ಸೇರಿದಂತೆ ಎಲ್ಲ ಅಭಿವೃದ್ಧಿ ವಿಷಯಗಳಲ್ಲಿ ಮುಂಚೂನಿಯಲ್ಲಿವೆ. ಈ ಹಿಂದಿನ ಮುಧೋಳ ತಾಲೂಕು ಜನಸಂಖ್ಯೆ ಆಧಾರದಲ್ಲಿ ನೋಡಿದ್ದೆ ಆದರೆ ಈಗ ಅಂಕೆ ಸಂಖ್ಯೆಗಳು ದುಪ್ಪಟ್ಟಾಗಿವೆ. ಸಹಜವಾಗಿ ಜನತೆಯ ಕೆಲಸ ಕಾರ್ಯಗಳು ಸಹ ವಿಳಂಬವಾಗುತ್ತಿದ್ದು ಇದಕ್ಕೆ ಪರಿಹಾರಾರ್ಥವಾಗಿ ತಕ್ಷಣದಿಂದಲೆ ಅಧಿಕಾರ ವಿಕೇಂದ್ರೀಕರಣ ವಾಗಬೇಕು.ಇದು ಸ್ಥಳೀಯರ ಸಮಯೋಚಿತ ಮತ್ತು ನ್ಯಾಯಯುತ ಬೇಡಿಕೆಯಾಗಿದೆ. 

ಈ ಹೋರಾಟಕ್ಕೆ ನಮ್ಮ ರೈತ ಸಂಘ ಮತ್ತು ಹಸಿರು ಸೇನೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ. ಹೋರಾಟಗಾರರು ರಾಜ್ಯ ಮುಖ್ಯಮಂತ್ರಿಗಳಿಗೆ ಭೇಟಿಯಾಗುವ ಸಲುವಾಗಿ ನಿಯೋಗ ತೆಗೆದುಕೊಂಡು ಬನ್ನಿ, ಮುಖ್ಯಮಂತ್ರಿಗಳಿಗೆ ನೂತನ ತಾಲೂಕಿಗಾಗಿ ನಾನು ಸಹ ಮನವಿ ಮಾಡಿಕೊಳ್ಳುತ್ತೇನೆ ಎಂದರು. 

ತಾಲೂಕು ಹೋರಾಟಗಾರರಾದ ಗಂಗಾಧರ ಮೇಟಿ, ವಿರೇಶ ಆಸಂಗಿ, ಶಿವಲಿಂಗ ಟಿರಕಿ, ಬಂದು ಪಕಾಲಿ, ಸಿದ್ದು ಶಿರೋಳ, ರಫೀಕ್ ಮಾಲದಾರ, ಹಣ್ಮಂತ ಜಮಾದಾರ,ಮೂಸಾ ಬೂದಿಹಾಳ ಮತ್ತು ರೈತ ಸಂಘದ ಪದಾಧಿಕಾರಿಗಳು, ಸದಸ್ಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. 


ಸುದ್ದಿ ಓದಿ