ಪತ್ನಿಗೆ ಕಿರುಕುಳ ನೀಡಬೇಡ ಎಂದ ಪತಿಯನ್ನೆ ಚೂರಿ ಇರಿದು ಹತ್ಯೆ ಮಾಡಿದ ಭೂಪ : ಖಾನಾಪುರದಲ್ಲಿ ದುರ್ಘಟನೆ, ಆರೋಪಿ ಅಂದರ್
ಬೆಳಗಾವಿ, ಅ, 31 : ತನ್ನ ಪತ್ನಿಯನ್ನು ಪೀಡಿಸುತ್ತಿದ್ದ ಭೂಪನಿಗೆ ಕಿರುಕುಳ ನೀಡಬೇಡ ಎಂದು ಎಚ್ಚರಿಕೆ ನೀಡಿದ ಪತಿಯನ್ನೆ ದೊಣ್ಣೆಯಿಂದ ಹೊಡೆದು, ಚೂರಿ ಇರಿದು ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಖಾನಾಪುರ ಪಟ್ಟಣದಲ್ಲಿ ನಡೆದಿದೆ.
ಖಾನಾಪುರ ಪಟ್ಟಣದ ನಿವಾಸಿ ಮಾರುತಿ ಜಾಧವ (40) ಹತ್ಯೆಯಾಗಿರುವ ದುರ್ಧೈವಿಯಾಗಿದ್ದಾನೆ. ಪ್ರಶಾಂತ ನಾರ್ವೇಕರ್ (35) ಹತ್ಯೆ ಮಾಡಿರುವ ಆರೋಪಿತನಾಗಿದ್ದಾನೆ.
ಪ್ರಶಾಂತ ಈತ ಮಾರುತಿ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಮಾರುತಿ ಪ್ರಶಾಂತ ಈತನಿಗೆ ತನ್ನ ಪತ್ನಿಯನ್ನು ಪೀಡಿಸದಂತೆ ಎಚ್ಚರಿಕೆಯನ್ನು ನೀಡಿದ್ದನು. ಈ ಹಿನ್ನೆಲೆಯಲ್ಲಿ ಕೋಪಗೊಂಡ ಆರೋಪಿತ ಪ್ರಶಾಂತ ಮಾರುತಿ ತಲೆಗೆ ದೊಣ್ಣೆಯಿಂದ ಹೊಡೆದ ಬಳಿಕ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಖಾನಾಪುರ ಪೊಲೀಸರು ಆರೋಪಿತ ಪ್ರಶಾಂತ ನನ್ನು ಬಂಧಿಸಿದ್ದಾರೆ.