ಕಸಾಪ ಚುನಾವಣಾ ಪ್ರಚಾರ ಚುರುಕು
ಗುಳೇದಗುಡ್ಡ,ನ.18: ರಾಜ್ಯದ ಕನ್ನಡ ನಾಡು ನುಡಿಯ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ಇದೇ ದಿ.21 ರಂದು ಜರುಗಲಿದೆ.
ರಾಜ್ಯ ಮತ್ತು ಜಿಲ್ಲಾಧ್ಯಕ್ಷ ಸ್ಥಾನಗಳಿಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಪರ ಪ್ರಚಾರ ಪಟ್ಟಣದಲ್ಲಿ ಕಳೆದ ನಾಲ್ಕು ದಿನಗಳಿಂದ ಚುರುಕುಗೊಂಡಿದೆ. ರಾಜ್ಯದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ನಾಡೋಜ ಡಾ. ಮಹೇಶ ಜೋಶಿ ಹಾಗೂ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಶಿವಾನಂದ ಶೆಲ್ಲಿಕೇರಿ ಅವರ ಗೆಲುವಿಗೆ ಅವರ ಅಭಿಮಾನಿಗಳು ಮತದಾರರ ಮನೆಮನೆಗೆ ತೆರಳಿ ಮತದಾರರಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಸಿದ್ದು ರಾವಳ, ಯಲ್ಲಪ್ಪ ಮನ್ನಿಕಟ್ಟಿ, ಸುರೇಶ ಸಾರಂಗಿ, ಬಸವರಾಜ ಯಂಡಿಗೇರಿ, ಡಾ. ಎಚ್.ಎಸ್.ಘಂಟಿ, ಮಲ್ಲಿಕಾರ್ಜುನ ರಾಜನಾಳ, ಡಾ.ಚಂದ್ರಶೇಖರ ಕಾಳನ್ನವರ, ಕಸಾಪ ತಾಲೂಕು ಅಧ್ಯಕ್ಷ ಸಿ.ಎಂ.ಜೋಶಿ, ಸುರೇಶ ಭಾಟ್, ಸೇರಿದಂತೆ ಇನ್ನಿತರರು ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ಡಾ. ಮಹೇಶ ಜೋಶಿ ಹಾಗೂ ಜಿಲ್ಲಾಧ್ಯಕ್ಷ ಸ್ಥಾನದ ಶಿವಾನಂದ ಶೆಲ್ಲಿಕೇರಿ ಪರ್ರಚಾರ ನಡೆಸಿದ್ದಾರೆ.
ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ಡಾ. ಮಹೇಶ ಜೋಶಿ ಹಾಗೂ ಜಿಲ್ಲಾಧ್ಯಕ್ಷ ಸ್ಥಾನದ ಜಿ.ಕೆ. ತಳವಾರ ಪರವಾಗಿ ಡಾ. ವಿ.ಎ. ಬೆನಕನಾಳ, ಮಹಾದೇವ ಜಗತಾಪ ಸೇರಿದಂತೆ ಇನ್ನಿತರರು ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ.
ಗುಳೇದಗುಡ್ಡದಲ್ಲಿ ಮತಗಟ್ಟೆ: ಚುನಾವಣೆಯ ಮತಗಟ್ಟೆಯನ್ನು ಪಟ್ಟಣದ ನಾಡಕಚೇರಿಯಲ್ಲಿ ತೆರೆಯಲಾಗಿದೆ. ಭಾನುವಾರ ದಿ.21 ರಂದು ಮತದಾನ ಜರುಗಲಿದ್ದೂ, ತಾಲೂಕಿನ ಸುಮಾರು 360 ಮತದಾರರು ಮತದಾನ ಮಾಡಲಿದ್ದಾರೆ. ಮತದಾನ ಬೆಳಿಗ್ಗೆ 8 ರಿಂದ ಸಾಯಂಕಾಲ 4 ಗಂಟೆಯವರೆಗೆ ಜರುಗಲಿದೆ ಎಂದು ತಹಸೀಲ್ದಾರ್ ಜಿ.ಎಂ.ಕುಲಕರ್ಣಿ ತಿಳಿಸಿದ್ದಾರೆ.