‘ಕನ್ನಡಕ್ಕಾಗಿ ನಾವು’ ಗೀತಗಾಯನ ಲಕ್ಷ ಕಂಠಗಳಲ್ಲಿ ಮೊಳಗಿದ ‘ಕನ್ನಡ ಡಿಂಡಿಮ’ ಕಾರ್ಯಕ್ರಮ
ಯಲಬುರ್ಗಾ 28: ಪಟ್ಟಣದ ಬಯಲು ರಂಗಮಂದಿರ ಆವರಣದಲ್ಲಿ ಗುರುವಾರ ತಾಲೂಕಾಡಳಿತ, ತಾಪಂ, ಪಟ್ಟಣ ಪಂಚಾಯಿತಿ ಇವರ ಸಯುಂಕ್ತಾಶ್ರಯದಲ್ಲಿ ಕರ್ನಾಟಕ ರಾಜೋತ್ಸವ ನಿಮಿತ್ಯ ಹಮ್ಮಿಕೊಂಡಿದ್ದ ಲಕ್ಷ ಕಂಠಗಳಲ್ಲಿ ಸಾಮೂಹಿಕ ಕನ್ನಡ ಗೀತೆ ಗಾಯನ, ಕನ್ನಡಕ್ಕಾಗಿ ನಾವು ಅಭಿಯಾನದ ಕಾರ್ಯಕ್ರಮಕ್ಕೆ ತಾಲೂಕಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಯಿತು.
ತಹಸೀಲ್ದಾರ ಶ್ರೀಶೈಲ ತಳವಾರ ಮಾತನಾಡಿ ಕನ್ನಡ ಭಾಷಾಭಿಮಾನದ ಬಗ್ಗೆ ಪ್ರತಿಯೊಬ್ಬರು ಕಾಳಜಿ ಬೆಳಸಿಕೊಳ್ಳಿ, ಸಾವಿರಾರು ವರ್ಷಗಳ ಇತಿಹಾಸವನ್ನು ಕನ್ನಡ ಭಾಷೆ ಹೊಂದಿದೆ ಎಂದರು. ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯ ಬಿಜೆಪಿ ಸರಕಾರದ ಕನ್ನಡ ಭಾಷೆ ಅಭಿವೃದ್ದಿ ಬೆಳವಣಿಗೆ ಹೆಚ್ಚು ಒತ್ತು ನೀಡಿದೆ ಎಂದರು.
ಈ ಸಂದರ್ಭದಲ್ಲಿ ಪ್ರಮೂಕವಾಗಿ ಸಿಪಿಐ ಎಂ.ನಾಗರಡ್ಡಿ ಅವರು ಕನ್ನಡ ಗಾಯನ ಹಾಡುವ ಮೂಲಕ ಸಾರ್ವಜನಿಕರನ್ನು ರಂಜಿಸಿದರು, ಗೀತಗಾಯನ ಕಾರ್ಯಕ್ರಮದ ನಂತರ ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ನಾನು ಕನ್ನಡದಲ್ಲೇ ಮಾತನಾಡುತ್ತೇನೆ, ಕನ್ನಡದಲ್ಲೇ ಬರೆಯುತ್ತೇನೆ, ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುತ್ತೇನೆ ಎಂಬ ಪಣ ತೊಡಲಾಯಿತು.
ಕನ್ನಡ ನಾಡಿನಲ್ಲಿ ವಾಸವಾಗಿರುವ ಕನ್ನಡೇತರರಿಗೂ ಪ್ರೀತಿಯಿಂದ ಕನ್ನಡ ಕಲಿಸುತ್ತೇನೆ. ಕನ್ನಡ ನಾಡು-ನುಡಿ, ಸಂಸ್ಕೃತಿ ಹಾಗೂ ಪರಂಪರೆ ಉಳಿಸಲು ಕಟಿಬದ್ಧವಾಗಿರುತ್ತೇನೆ ಎಂಬ ಸಂಕಲ್ಪ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಪಪಂ ಮುಖ್ಯಾಧಿಕಾರಿ ಶಿವಕುಮಾರ ಕಟ್ಟಿಮನಿ, ಉಪಾಧ್ಯಕ್ಷೆ ಶಾಂತಾ ಮಾಟೂರು, ಸದಸ್ಯರಾದ ರೇವಣಪ್ಪ ಹಿರೇಕುರಬರ, ಅಂದಯ್ಯ ಕಳ್ಳಿಮಠ, ಹನುಮಂತ ಭಜೆಂತ್ರಿ, ಕಳಕಪ್ಪ ತಳವಾರ, ಕನ್ನಡಪರ ಹೋರಾಟಗಾರರಾದ ಶಿವಕುಮಾರ ನಾಗನಗೌಡ್ರ, ರಾಜಶೇಖರ ಶ್ಯಾಗೋಟಿ, ಗ್ರೇಡ-2 ತಹಸೀಲ್ದಾರ ನಾಗಪ್ಪ ಸಜ್ಜನ, ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.