ವೀಸಾ ಪಡೆಯಲು ಜನಜಂಗುಳಿ, ಕಾಲ್ತುಳಿತಕ್ಕೆ 11 ಮಂದಿ ಸಾವು
ಕಾಬೂಲ್,ಅಕ್ಟೋಬರ್ 21 : ಅಫ್ಘಾನಿಸ್ತಾನದಲ್ಲಿ ಸಾವಿರಾರು ಮಂದಿ ದೇಶ ತೊರೆಯಲು ತುದಿಗಾಲಿನಲ್ಲಿ ನಿಂತಿದ್ದು, ವೀಸಾ ಪಡೆಯುವ ಯತ್ನದ ಸಮಯದಲ್ಲಿ ಉಂಟಾದ ಕಾಲ್ತುಳಿತಕ್ಕೆ 11 ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ.ಅಪ್ಘಾನಿಸ್ತಾನದ ಪೂರ್ವ ನಂಗರ್ಹಾರ್ ಪ್ರಾಂತ್ಯದ ರಾಜಧಾನಿಯಾದ ಜಲಾಲಾಬಾದ್ ನಗರದಲ್ಲಿ ಬುಧವಾರ ಕಾಲ್ತುಳಿತ ಸಂಭವಿಸಿದ್ದು, ಕನಿಷ್ಠ 11 ಮಹಿಳೆಯರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ದೇಶ ತೊರೆಯಲು ವೀಸಾಗಾಗಿ ಪಾಕಿಸ್ತಾನ ರಾಯಭಾರ ಕಚೇರಿ ಬಳಿ ಸಾವಿರಾರು ಜನ ಸೇರಿದ್ದರು. ಈ ವೇಳೆ ಕಾಲ್ತುಳಿತ ಸಂಭವಿಸಿದ್ದು, ಘಟನೆಯಲ್ಲಿ 11 ಜನರು ಸಾವನ್ನಪ್ಪಿದ್ದು, 13 ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಾಂತೀಯ ಸರ್ಕಾರದ ವಕ್ತಾರ ಅಟೌಲಾ ಖೋಗಿಯಾನಿ ತಿಳಿಸಿದ್ದಾರೆ.
ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ವೃದ್ಧರಾಗಿದ್ದಾರೆ. ಇವರು ಪಾಕಿಸ್ತಾನಕ್ಕೆ ತೆರಳಲು ವೀಸಾ ಪಡೆಯಲು ಬಂದಿದ್ದರು ಎನ್ನಲಾಗಿದೆ.ಪ್ರತ್ಯೇಕ ಘಟನೆಯಲ್ಲಿ, ಉತ್ತರ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ನಡೆಸಿದ ದಾಳಿಯಲ್ಲಿ ಕನಿಷ್ಠ 34 ಅಫ್ಘಾನ್ ಪೊಲೀಸರು ಸಾವನ್ನಪ್ಪಿದ್ದಾರೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.