‘ನಿರುದ್ಯೋಗ, ಬಡತನ, ಜಾತಿ ಸಮಸ್ಯೆಗಳು ಇನ್ನೂ ಜೀವಂತ ಉಳಿದಿರುವುದು ಕಳವಳಕಾರಿ’
ರಾಮದುರ್ಗ 16: ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಂವಿಧಾನ, ರೈತ ಕಾರ್ಮಿಕ ಹಕ್ಕುಗಳ ಉಳುವಿಗಾಗಿ ಆಗ್ರಹಿಸಿ ಸ್ವಾತಂತ್ರ್ಯ ಚಳುವಳಿಯ ಅಂಗವಾಗಿ ಸಿಐಟಿಯು ನೇತೃತ್ವದಲ್ಲಿ ಆಗಸ್ಟ್ 14ರಂದು ಡಬ್ಬಾ ಅಂಗಡಿಗಳ ಆವರಣದಲ್ಲಿ ಧರಣಿ ಕಾರ್ಯಕ್ರಮ ಜರುಗಿತು.
ಹಿಂದೆ ವ್ಯಾಪಾರಕ್ಕಾಗಿ ಬಂದಿದ್ದ ವಿದೇಶಿಯರು ಸುಮಾರು ವರ್ಷಗಳ ದೇಶವನ್ನು ಆಳಿ ಸಂಪತ್ತನ್ನು ಲೂಟಿ ಹೊಡೆದಿದ್ದರು. ಬ್ರಿಟಿಷ್ ಸಾಮ್ರಾಜ್ಯ ಷಾಹಿಗಳನ್ನು ದೇಶದಿಂದ ಹೊರದಬ್ಬಿದ ಹಾಗೂ ರಾಜ ಪದ್ಧತಿಯನ್ನು ಧಿಕ್ಕರಿಸಿದ ತ್ಯಾಗಿಗಳ ಪ್ರಯತ್ನದಿಂದ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ ಎಂದು ಕಾರ್ಮಿಕ ಮುಖಂಡ ಜಿ.ಎಂ. ಜೈನೆಖಾನ್ ಹೇಳಿದರು.
ಉದ್ಯೋಗ, ಆರೋಗ್ಯ, ಶಿಕ್ಷಣ ಸ್ವಾತಂತ್ರ್ಯಾ ನಂತರ ಎಲ್ಲರಿಗೂ ಸಿಗಬಹುದೆಂಬ ಕನಸು ನನಸಾಗಬೇಕಿದೆ. ಅದಕ್ಕಾಗಿ ಇನ್ನೊಂದು ಚಳವಳಿ ನಡೆಯಬೇಕಾದ ಅವಶ್ಯಕತೆ ಇದೆ ಎಂದು ಹೇಳಿದ ಜೈನೆಖಾನ ಅವರು, ನಿರುದ್ಯೋಗ, ಬಡತನ, ಜಾತಿ ಹಾಗೂ ಲಿಂಗ ತಾರತಮ್ಯದಂತಹ ಸಮಸ್ಯೆಗಳು ದೇಶದಲ್ಲಿ ಇನ್ನೂತನಕ ಜೀವಂತ ಉಳಿದಿರುವುದಕ್ಕೆ ಅವರು ಕಳವಳ ವ್ಯಕ್ತ ಪಡಿಸಿದರು.
ಸಿಐಟಿಯು ತಾಲ್ಲೂಕು ಅಧ್ಯಕ್ಷ ನಾಗಪ್ಪ ಸಂಗೊಳ್ಳಿ ಮಾತನಾಡಿದರು. ಸಿಐಟಿಯು ಕಾರ್ಯದರ್ಶಿ ವೀರಭದ್ರ ಕಂಪ್ಲಿ ಸ್ವಾಗತಿಸಿ ವಂದಿಸಿದರು.
ಪಂಚಾಯ್ತಿ ನೌಕರ ಸಂಘದ ತಾಲ್ಲೂಕು ಅಧ್ಯಕ್ಷ ದಿಲಿಪ್ ಬೋವಿ, ಅಕ್ಷರ ದಾಸೋಹ ನೌಕರರ ಸಂಘದ ತುಳಸಮ್ಮ ಮಾಳದಕರ, ಅಂಗನಾಡಿ ನೌಕರ ಸಂಘದ ಬೋರವ್ವ ತೆಕ್ಕಿ, ವಿಜಯಲಕ್ಷ್ಮೀ ಸಿದ್ದಿಬಾವಿ, ರಾಚವ್ವ ರಾಮದುರ್ಗ, ಡಬ್ಬಾ ಅಂಗಡಿಕಾರರ ಸಂಘದ ಫಾರೂಖ್ ಶೇಖ್, ಮೆಹಬೂಬ ನದಾಫ ಮತ್ತು ತೌಫೀಕ ಗೋಕಾಕ ಭಾಗವಹಿಸಿದ್ದರು.