ಮಹಲಿಂಗಪುರ

ಶಾಲೆಯ ಬೆಲ್, ಬಿಲ್ ಕಡೆ ಗಮನ ಕೊಡುವವ ಶಿಕ್ಷಕನಲ್ಲ: ಡಿ.ವಿ.ಹಿರೇಮಠ

ಶಾಲೆಯ ಬೆಲ್, ಬಿಲ್ ಕಡೆ ಗಮನ ಕೊಡುವವ ಶಿಕ್ಷಕನಲ್ಲ: ಡಿ.ವಿ.ಹಿರೇಮಠ

ಮಹಾಲಿಂಗಪುರ 10: ಶಾಲೆಯಲ್ಲಿ ಬರೀ ಬೆಲ್ ಮತ್ತು ಪಗಾರದ ಬಿಲ್ ಬಗ್ಗೆ ಮಾತ್ರ ಗಮನ ಹರಿಸುವವ ಒಳ್ಳೆಯ ಶಿಕ್ಷಕನಾಗಲು ಸಾಧ್ಯವಿಲ್ಲ ಎಂದು ಕುಂಚನೂರಿನ ಸರಕಾರಿ ಪ್ರೌಢಶಾಲೆಯ ಶಿಕ್ಷಕ, ರಾಜ್ಯಮಟ್ಟದ ಕನ್ನಡ ಸಂಪನ್ಮೂಲ ವ್ಯಕ್ತಿ ಡಿ.ವಿ.ಹಿರೇಮಠ ಹೇಳಿದರು.  

ಸ್ಥಳೀಯ ಬಸವಾನಂದ ಶಾಲೆಯಲ್ಲಿ ರಾಷ್ಟ್ರೋತ್ಥಾನ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಶಿಕ್ಷಕರ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿ, ಶಿಕ್ಷಕರು ಪಗಾರಕ್ಕಿಂತ ತಮ್ಮ ಪರ್ಫಾರ್ಮನ್ಸ್‌ ಕಡೆ ಗಮನ ಕೊಡಬೇಕು. ನಿರ್ವ್ಯಸನ, ಶಿಸ್ತು, ಸಮಯಪ್ರಜ್ಞೆ, ಜಾತ್ಯಾತೀತತೆ, ರಾಷ್ಟ್ರೀಯತೆಯ ಆದರ್ಶಗಳ ಪರಿಪಾಲಕರಾಗಿ ಸ್ವತಃ ಉದಾಹರಣೆಯಾಗಬೇಕು ಎಂದರು.  

ರಾಷ್ಟ್ರೋತ್ಥಾನ ಪರಿಷತ್‌ನ ಜಿಲ್ಲಾ ಸಂಚಾಲಕ ಶ್ರೀನಿವಾಸ ಪಾಟೀಲ ಮಾತನಾಡಿ, ಪಂಚಮುಖಿ ಶಿಕ್ಷಣ ಹಾಗೂ ಮಗುವಿನ ಸರ್ವಾಂಗೀಣ ಪ್ರಗತಿಯಲ್ಲಿ ಶಿಕ್ಷಣದ ಪಾತ್ರದ ಬಗ್ಗೆ ತಿಳಿಸಿದರು. ಜಗದಾಳ ಸರಕಾರಿ ಪ್ರೌಢಶಾಲೆಯ ಶಿಕ್ಷಕ ರಾಜ್ಯಮಟ್ಟದ ಇಂಗ್ಲೀಷ್ ಸಂಪನ್ಮೂಲ ವ್ಯಕ್ತಿ ಬಸವರಾಜ ಜಂಬಗಿ ಮಾತನಾಡಿ, ಇಂಗ್ಲೀಷ್ ಭಾಷೆ ಕಬ್ಬಿಣದ ಕಡಲೆಯಲ್ಲ, ಆಸಕ್ತಿ ತೋರಿದರೆ ಅದು ಸುಲಿದ ಬಾಳೆಯಂತೆ ಸುಲಭ ಎಂದು ಸರಳ ಸೂತ್ರ ತಿಳಿಸಿದರು.  

ಇದಕ್ಕೂ ಮುನ್ನ ಮುಧೋಳದ ಜ್ಯೋತ್ಸ್ನಾ ಸಮಾಜ ಮಾತನಾಡಿ ಭಾರತೀಯ ಶಿಕ್ಷಣ ಏಕೆ? ಹೇಗೆ? ಎಂಬ ವಿಷಯದ ಬಗ್ಗೆ ವಿವರಿಸಿದರು. ಸಮಾರೋಪ ಸಮಾರಂಭದಲ್ಲಿ ಉಪನ್ಯಾಸಕ ಶಿವಲಿಂಗ ಸಿದ್ನಾಳ ಮಾತನಾಡಿ, ಶಿಕ್ಷಕರು ಮಕ್ಕಳಲ್ಲಿ ಸಕಾರಾತ್ಮಕ ಮನೋಭಾವ ಬೆಳೆಸಬೇಕು. ಪ್ರೋತ್ಸಾಹಕರ ಮಾತುಗಳಿಂದ ಉತ್ಸಾಹ ಇಮ್ಮಡಿಗೊಳಿಸಬೇಕು ಎಂದರು.  

ಕಾರ್ಯಾಗಾರದಲ್ಲ್ಲಿ ಸಂಪನ್ಮೂಲ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು. ಎಂ.ಪಿ.ಅಂಗಡಿ, ಎಂ.ಎಂ.ಕಟಗಿ, ಡಾ.ಬಿ.ಡಿ.ಸೋರಗಾಂವಿ, ಪಿ.ಎಸ್‌.ಬೆಳಗಲಿ, ಕೆ,ಸಿ,ಚಿಂಚಲಿ, ಎಸ್‌.ಕೆ.ಗಿಂಡೆ, ಹುಮಾಯೂನ ಸುತಾರ, ವಿ.ಆರ್‌.ಪೂಜಾರಿ, ಸಿದ್ದಾರೂಢ ಮುಗಳಖೋಡ, ಎಂ.ಪಿ.ಕಾಗಿ, ಚನ್ನಪ್ಪ ಹುಣಶಾಳ, ಕಾಂಬ್ಳೇಕರ ಹಾಗೂ 40ಕ್ಕೂ ಹೆಚ್ಚು ಶಿಕ್ಷಕರು ಭಾಗವಹಿಸಿದ್ದರು. 


ಸುದ್ದಿ ಓದಿ