ಫಲಾನುಭವಿಗಳಿಗೆ ಸಾಲ ಮಂಜೂರಾತಿ ಪತ್ರ ವಿತರಣೆ
ಫಲಾನುಭವಿಗಳಿಗೆ ಸಾಲ ಮಂಜೂರಾತಿ ಪತ್ರ ವಿತರಣೆ
ಲೋಕದರ್ಶನ ವರದಿ
ರಾಯಬಾಗ 05: ಸರಕಾರ ನೀಡುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಜನಾಂಗದ ಜನರು ಆರ್ಥಿಕವಾಗಿ ಸದೃಢರಾಬೇಕೆಂದು ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಡಿ.ಎಮ್.ಐಹೊಳೆ ಹೇಳಿದರು.
ಸೋಮವಾರ ಪಟ್ಟಣದ ಶಾಸಕರ ಗೃಹಕಚೇರಿಯಲ್ಲಿ ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದಿಂದ ನೇರ ಸಾಲ ಯೋಜನೆಯಡಿ ಆಯ್ಕೆಯಾದ 97 ಫಲಾನುಭವಿಗಳಿಗೆ ಸಾಲ ಮಂಜೂರಾತಿ ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು, ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಪಶು ಸಾಕಾಣಿಕೆಗೆ ಆದಿಜಾಂಬವ ಅಭಿವೃದ್ಧಿ ನಿಗಮದಿಂದ ಸಹಾಯಧನದೊಂದಿಗೆ ನೇರ ಸಾಲವನ್ನು ನೀಡಲಾಗುತ್ತಿದೆ. ಇದು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಆಗುವುದರಿಂದ ಫಲಾನುಭವಿಗಳು ಬ್ಯಾಂಕ್‍ಗೆ ಅಲೆದಾಡುವುದು ತಪ್ಪಲಿದೆ ಎಂದು ತಿಳಿಸಿದರು.
ನೇರ ಸಾಲ ಯೋಜನೆಯಡಿ ಒಟ್ಟು ರೂ.50 ಸಾವಿರ ನೀಡಲಾಗುತ್ತಿದ್ದು, ಇದರಲ್ಲಿ ರೂ.25 ಸಾವಿರ ಸಾಲ ಮತ್ತು ಇನ್ನುಳಿದ ರೂ.25 ಸಾವಿರ ಸಹಾಯಧನ ಇರುತ್ತದೆ. ಫಲಾನುಭವಿಗಳು ಪಶುಗಳನ್ನು ಖರೀದಿಸಿ ಹೈನುಗಾರಿಕೆ ಮಾಡುವುದರಿಂದ ತಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಲು ಸಹಾಯವಾಗುತ್ತದೆ ಎಂದು ತಿಳಿಸಿದರು.
ಆದಿ ಜಾಂಬವ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಬಸವರಾಜ ಚನ್ನೆನ್ನವರ, ತಾಲೂಕು ಅಭಿವೃದ್ಧಿ ಅಧಿಕಾರಿ ಬಿ.ಎಸ್.ಅಂಗಡಿ, ಮುಖಂಡರಾದ ಸದಾಶಿವ ಘೋರ್ಪಡೆ, ಸದಾನಂದ ಹಳಿಂಗಳಿ, ಅರುಣ ಐಹೊಳೆ ಹಾಗೂ ಫಲಾನುಭವಿಗಳು ಇದ್ದರು.