ರೈತರ ಬೇಡಿಕೆ ಈಡೇರಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ
ಲೋಕದರ್ಶನ ವರದಿ
ಕಾಗವಾಡ 08 : ಅ. 12 ರಂದು ದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ನಮ್ಮ ಎಲ್ಲ ಬೇಡಿಕೆಗಳು ಈಡೇರದೇ ಇದ್ದಲ್ಲಿ ಅ. 13 ರಿಂದಲೇ ಕರ್ನಾಟಕದ 31 ಜಿಲ್ಲೆಗಳು ಮತ್ತು ಮಹಾರಾಷ್ಟ್ರದ ಗಡಿ ಜಿಲ್ಲೆಗಳಲ್ಲಿ ರೈತರಿಂದ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ, ಉಗ್ರ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರೈತ ಸಂಘದ ಗೌರವಾಧ್ಯಕ್ಷ ಶಶಿಕಾಂತ ಗುರುಜಿ ಅಧ್ಯಕ್ಷ ಚೂನಪ್ಪಾ ಪೂಜಾರಿ, ಮತ್ತು ಮಹಾರಾಷ್ಟ್ರದ ಸ್ವಾಭಿಮಾನಿ ರೈತ ಸಂಘಟನೆಯ ಸಂಸ್ಥಾಪಕ ರಾಜು ಶೆಟ್ಟಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಅವರು, ಬುಧುವಾರ ದಿ. 07 ರಂದು ಪಟ್ಟಣದ ಪ.ಪಂ. ಎದುರಿನ ಆವರಣದಲ್ಲಿ ನಡೆದ ಬೃಹತ್ ರೈತರ ಸಭೆಯಲ್ಲಿ ಮಾತನಾಡುತ್ತಿದ್ದರು.
ರೈತ ಸಂಘದ ಗೌರವಾಧ್ಯಕ್ಷ ಶಶಿಕಾಂತ ಪಡಸಲಗಿ ಗುರುಜಿ ಮಾತನಾಡಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಈ ಹಿಂದೆ ಸಾಕಷ್ಟು ಬಾರಿ ಅವರ ಮನೆಯಲ್ಲಿಯೇ ಭೇಟ್ಟಿ ಮಾಡಿ, ನಮ್ಮ ಬೇಡಿಕೆಗಳ ಕುರಿತು ಮನವಿ ಸಲ್ಲಿಸಿದ್ದೇವು. ಕಳೆದ 10 ವರ್ಷಗಳಿಂದ ಸಕ್ಕರೆಯ ಎಂಎಸ್‌ಪಿ ದರವನ್ನು ಪರಿಷ್ಕರಿಸಿಲ್ಲ. ಸಕ್ಕರೆ ಎಂಎಸ್‌ಪಿ ದರ, ಇಥೆನಾಲ್ ದರವನ್ನು ಹೆಚ್ಚಿಸಬೇಕು. ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು. ಕಾರ್ಖಾನೆಗಳು ರೈತರ ಕಬ್ಬಿಗೆ ಆರು ಸಾವಿರ ಬೆಲೆ ಘೋಷಿಸಬೇಕು. ಇಲ್ಲವಾದರೇ ಅ. 13 ರಿಂದಲೇ ರಾಜ್ಯದ ಎಲ್ಲ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಿ, ಉಗ್ರ ಹೋರಾಟ ಪ್ರಾರಂಭಿಸುವುದಾಗಿ ತಿಳಿಸಿದರು.
ರೈತರ ಒಗ್ಗಟ್ಟಿನಲ್ಲಿ ಬಲವಿದೆ ಎಂದು ತಿಳಿಸಿದರು. ಈ ವೇಳೆ ರೈತ ಮುಖಂಡರಾದ ರಾಜೇಂದ್ರ ಗಡ್ಡೆನ್ನವರ, ಸುರೇಶ ಚೌಗುಲೆ, ರಾಹುಲ ಕಟಗೇರಿ, ರಾಜು ಪವಾರ, ಕಾಕಾ ಪಾಟೀಲ, ಶರದ ಪಾಟೀಲ, ಮನೋಜ ಮನಗೂಳೆ, ಕೆಂಪಣ್ಣಾ ಅಂಗಡಿ. ಆದಿನಾಥ ಬಿಂದಗೆ, ವೈಭವ ಧೊತ್ರೆ ಸೇರಿದಂತೆ ಸಾವಿರಾರು ರೈತರು ಉಪಸ್ಥಿತರಿದ್ದರು.