ಮಕ್ಕಳಲ್ಲಿ ಸಾಂಸ್ಕೃತಿಕ ಪ್ರಜ್ಞೆ ಬಿತ್ತುವುದು ಅನಿವಾರ್ಯ: ಡಾ.ಶಿವಕುಮಾರ
ಸಿರುಗುಪ್ಪ..14. ಇಂದಿನ ಮಕ್ಕಳಲ್ಲಿ ಸಾಮಾನ್ಯ ಸಮಸ್ಯೆಗಳನ್ನು ಸಹ ಎದುರಿಸಲಾಗದ ದುರ್ಬಲ ಮನಸ್ಥಿತಿಯಿರುವುದರಿಂದ ಸಮಾಜದಲ್ಲಿ ಚಿಕ್ಕ ಚಿಕ್ಕ ವಿಚಾರಗಳಿಗೂ ಮಕ್ಕಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ಹಾಗಾಗಿ ಮನಸ್ಥಿತಿಯಲ್ಲಿ ಬದಲಾವಣೆ ತರುವ ಉದ್ದೇಶದಿಂದ ಮಕ್ಕಳಲ್ಲಿ ಸಾಂಸ್ಕೃತಿಕ ಪ್ರಜ್ಞೆ ಬಿತ್ತುವುದು ಅನಿವಾರ್ಯವಾಗಿದೆ ಎಂದು ಹಿರಿಯ ರಂಗ ಕಲಾವಿದ ಡಾ.ಶಿವಕುಮಾರ ತಾತ ಅಭಿಪ್ರಾಯ ಪಟ್ಟರು.
ತಾಲೂಕಿನ ಮಿಟ್ಟೆಸೂಗೂರು ಗ್ರಾಮದ ಮಾರಮ್ಮ ದೇವಿ ಸಭಾಂಗಣದಲ್ಲಿ ಕಾರಂತ ರಂಗಲೋಕ ಕಲಾತ್ಮಕ ಮನಸ್ಸುಗಳ ತಾಣ (ರಿ) ಭೈರಗಾಮದಿನ್ನೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡ 'ರಂಗ ಮುಂಗಾರು -2024' ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡುತ್ತಾ ಕಳೆದ ಹತ್ತು ವರ್ಷಗಳ ಹಿಂದೆ ಗ್ರಾಮೀಣ ಭಾಗದಲ್ಲಿ ಬಯಲಾಟ, ನಾಟಕ, ಪುರಾಣ, ಪ್ರವಚನ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯುತ್ತಿದ್ದವು. ಅವುಗಳೇ ನಮ್ಮನ್ನು ಕಲಾವಿದರನ್ನಾಗಿ ತಯಾರು ಮಾಡಿದ್ದು. ಆದರೆ ಇಂದಿನ ಟಿ.ವಿ, ಮೊಬೈಲ್ ಗಳ ಅನಿಯಮಿತ ಬಳಕೆಯಿಂದಾಗಿ ಮನುಷ್ಯನಲ್ಲಿನ ಸಾಂಸ್ಕೃತಿಕ ಪ್ರಜ್ಞೆ ಅಧೋಃಗತಿಯತ್ತ ಸಾಗಿದೆ. ಸಮಾಜದ ವರ್ತನೆಯಲ್ಲಿ ಬದಲಾವಣೆ ತರುವ ಕಾರ್ಯದಲ್ಲಿ ಈ ಸಂಸ್ಥೆ ಕಳೆದ ಹತ್ತು ವರ್ಷಗಳಿಂದ ಅವಿರತ ಶ್ರಮ ವಹಿಸುತ್ತಿದೆ ಎಂದು ಹೇಳಿದರು.
ನಂತರ ಕಾರ್ಯದರ್ಶಿ ಆರ್.ಪಿ. ಮಂಜುನಾಥ್.ಬಿ.ಜಿ.ದಿನ್ನೆ ಮಾತಾನಾಡಿ ರಂಗಭೂಮಿಯ ಉಗಮದ ಮೂಲ ನೆಲೆಗಳಾದ ಗ್ರಾಮೀಣ ಭಾಗದಲ್ಲಿನ ಸಾಂಸ್ಕೃತಿಕ ಪರಂಪರೆಗೆ ಪುನಶ್ಚೇತನ ಕೊಡುವ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಶಿಕ್ಷಣದಲ್ಲಿ ರಂಗಭೂಮಿಯನ್ನು ಅಳವಡಿಸುವ ಮೂಲಕ ಮಕ್ಕಳಲ್ಲಿ ಪ್ರಬುದ್ಧತೆಯನ್ನು ಹಾಗೂ ಸಮಾಜದಲ್ಲಿ ಸ್ವಾಸ್ಥ್ಯತೆಯನ್ನು ಬೆಳೆಸಬಹುದಾಗಿದೆ ಎಂದು ನುಡಿದರು.
ತದನಂತರ ನಡೆದ ಶಾರದ ಮತ್ತು ತಂಡದ ಸಮೂಹ ನೃತ್ಯಗಳು, ದೇವರಾಜ ಮತ್ತು ತಂಡದ ಗೊರವರ ಕುಣಿತ, ಪ್ರೊ.ಶಾಂತನಾಯ್ಕ ರಚನೆಯ ಆರ್.ಪಿ.ಈಶಪ್ಪ ನಿರ್ದೇಶನದ ಹನುಮಂತ ಮತ್ತು ತಂಡದ ಹಾರೋ ಹಕ್ಕಿ ನಾಟಕ, ಮೂಕಣ್ಣ ಮತ್ತು ತಂಡದ ಕೊರವಂಜಿ ನೃತ್ಯರೂಪಕ, ವೀರೇಶ ಮತ್ತು ತಂಡ ಕೋಲಾಟ ಹಾಗೂ ಸುನಂದ ಮತ್ತು ತಂಡದ ಸುಗಮ ಸಂಗೀತ ಪ್ರೇಕ್ಷಕರ ಮನಸಳೆಯುವಲ್ಲಿ ಯಶಸ್ವಿಯಾದವು. ಇದೇ ಸಂದರ್ಭದಲ್ಲಿ ರಂಗದಿಗ್ಗಜ ಚಿದಾನಂದ ಗವಾಯಿಗಳಿಗೆ 'ಕಾರಂತ ರತ್ನ -2024' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ರಾವಿಹಾಳ್ ಗ್ರಾ.ಪಂ ಅಧ್ಯಕ್ಷ ಬಿ.ಜಯರಾಮರೆಡ್ಡಿ, ಹಚ್ಚೊಳ್ಳಿ ರೈತ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಕೆ.ನರಸನಗೌಡ, ವೈದ್ಯರಾದ ಡಾ.ಜಿ.ನಂದೀಶ್, ಡಾ.ಮಸ್ತಾನ್ ವಲಿ ಖಾದ್ರಿ ಹಾಗೂ ಮುಖಂಡ ಮಾರೆಪ್ಪ,ಆರ್.ಮಲ್ಲನಗೌಡ,ರಮೇಶ ಮತ್ತಿತರರು ಭಾಗವಹಿಸಿದ್ದರು. ಸದಸ್ಯ ಡಿ.ಎಂ.ಯಲ್ಲಪ್ಪ ಸ್ವಾಗತಿಸಿದರು. ವಿನಯ್ ವಂದಿಸಿದರು. ಅತಿಥಿ ಶಿಕ್ಷಕ ಕುಮಾರ್ ನಿರೂಪಿಸಿದರು.