ಮಹಿಳಾ,ಮಕ್ಕಳ ಕಳ್ಳ ಸಾಗಾಣಿಕೆಗೆ ವಿಶ್ವದಲ್ಲಿ ಭಾರತಕ್ಕೆ ಎರಡನೇ ಸ್ಥಾನ: ಕಿರಣಕುಮಾರ
ಮಹಾಲಿಂಗಪುರ : ಮಹಿಳಾ ಮತ್ತು ಮಕ್ಕಳ ಕಳ್ಳ ಸಾಗಾಣಿಕೆಗೆ ಭಾರತ ದೇಶ ಎರಡನೇ ಸ್ಥಾನದಲ್ಲಿದ್ದು ಬಡವರು ಹಾಗೂ ನಿರ್ಗತಿಕರೇ ಇವರ ಟಾರ್ಗೆಟ್ ಆಗಿದ್ದಾರೆ ಎಂದು ಬನಹಟ್ಟಿಯ ದಿವಾನಿ ನ್ಯಾಯಾಧೀಶರಾದ ಕಿರಣಕುಮಾರ್ ವಡಿಗೇರಿ ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿ ಬನಹಟ್ಟಿ ನ್ಯಾಯವಾದಿಗಳ ಸಂಘ ಹಾಗೂ ಅಭಿಯೋಜನಾ ಇಲಾಖೆ ಆಶ್ರಯದ ಕಾನೂನು ಅರಿವು-ನೆರವು ಕಾರ್ಯಕ್ರಮ ಅಡಿಯಲ್ಲಿ ಮಾನವ ಕಳ್ಳಸಾಗಾಣಿಕೆ ತಡೆಗಟ್ಟುವಿಕೆ ತಾಲೂಕ ಮಟ್ಟದ ಒಂದು ದಿನದ ಕಾರ್ಯಾಗಾರವನ್ನು ಬುಧವಾರ ಸ್ಥಳೀಯ ಪೋಲಿಸ್ ಠಾಣೆಯ ಸಭಾಂಗಣದಲ್ಲಿ ಉದ್ಘಾಟಿಸಿ ಮಹಿಳಾ ಮತ್ತು ಮಕ್ಕಳ ಶೋಷಣೆ ತಡೆಯುವ ನಿಟ್ಟಿನಲ್ಲಿ ನಾಗರೀಕರನ್ನುದ್ದೇಶಿಸಿ ಮಾತನಾಡಿದರು.
ದೊಡ್ಡ ದೊಡ್ಡ ನಗರಗಳಿಂದ ಹಣದಾಸೆಗಾಗಿ ಮಹಿಳೆಯರನ್ನು ಮತ್ತು ಮಕ್ಕಳನ್ನು ಅಪಹರಿಸಲಾಗುತ್ತಿದ್ದು ಮಹಾಲಿಂಗಪುರ ಸುತ್ತಮುತ್ತ ಇಂಥ ಪ್ರಕರಣಗಳ ಬಗ್ಗೆ ಮಾಹಿತಿ ಸಿಕ್ಕಿದ್ದರಿಂದ ಜನರಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸಲು ಈ ಕಾರ್ಯಕ್ರಮವನ್ನು ಇಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಕೆಲ ಪಟ್ಟಭದ್ರ ಹಿತಾಸಕ್ತಿಗಳು ಮಕ್ಕಳಲ್ಲಿ ಜಾತಿ ವೈಷಮ್ಯ ಹಾಗೂ ಸಮಾಜದ ಜಾತಿ ಜಾತಿಗಳಲ್ಲಿ ಬೆಂಕಿ ಹಚ್ಚುವ ಕೆಲಸವನ್ನು ಮಾಡಿ ದೇಶವನ್ನು ಮತ್ತೆ ದಶಕಗಳ ಹಿಂದಿನ ಪರಿಸ್ಥಿತಿಗೆ ಕೊಂಡೊಯ್ಯುವ ಹುನ್ನಾರ ನಡೆಸಿದ್ದಾರೆ. ನಿಮ್ಮ ಧರ್ಮವನ್ನು ಎಷ್ಟು ಪ್ರೀತಿಸುತ್ತಿರೋ ಅಷ್ಟೇ ಮತ್ತೊಂದು ಧರ್ಮಕ್ಕೂ ಗೌರವ ಕೊಡಬೇಕು. ಸಮಾಜದಲ್ಲಿರುವ ವಿಚ್ಚಿದ್ರಕಾರಿ ವ್ಯಕ್ತಿಗಳ ಬಗ್ಗೆ ಪೊಲೀಸರಿಗೆ ಅಥವಾ ತಾಲೂಕು ಕಾನೂನು ಸೇವಾ ಸಮಿತಿಗೆ ಮಾಹಿತಿ ನೀಡಿ 02 ಲಕ್ಷದವರೆಗೆ ಉಚಿತ ಕಾನೂನು ನೆರವು ಪಡೆದು ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡುವಲ್ಲಿ ಸಹಕರಿಸಿ ಎಂದರು.
ನಂತರ ಮಾತನಾಡಿದ ಬನಹಟ್ಟಿ ದಿವಾನಿ ನ್ಯಾಯಾಧೀಶರಾದ ಶ್ರೀಮತಿ ಟಿ.ಸಿ ಶುಷ್ಮ ಮಾತನಾಡಿ, ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಿದ್ದು ತಡೆಯಲು ಬನಹಟ್ಟಿಯಲ್ಲಿ ಪ್ರತಿವಾರ ಕೌಟುಂಬಿಕ ದೌರ್ಜನ್ಯ ಕಾನೂನು ಸಹಕಾರ ಅಲ್ಲದೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆಯಲ್ಲಿ 20 ಲಕ್ಷಗಳವರೆಗೆ ಚಿಕಿತ್ಸಾ ಧನ ನೀಡಲಾಗುತ್ತದೆ. ಎಲ್ಲ ತರಹದ ಕಾನೂನು ನೆರವಿಗಾಗಿ ತಾಲೂಕಿನ ಸೇವಾ ಸಂಘಕ್ಕೆ ಸಂಪರ್ಕಿಸಿ ಎಂದರು.
ಉಚಿತ ಕಾನೂನು ಸಲಹೆ ಮತ್ತು ನೆರವು ಎಂತಹವರಿಗೆ : ಪ.ಜಾತಿ, ಪ.ಪಂಗಡಕ್ಕೆ ಸೇರಿದ ಮಹಿಳೆಯರು ಮತ್ತು ಮಕ್ಕಳು, ಕಾರ್ಖಾನೆಯ ಕಾರ್ಮಿಕರು, ಗುಂಪು ಘರ್ಷಣೆ, ಗಲಭೆ, ಪ್ರವಾಹ, ಕ್ಷಾಮ, ಭೂಕಂಪ ಕೈಗಾರಿಕಾ ವಿನಾಶ ಮುಂತಾದವುಗಳು, ಮತೀಯ ದೌರ್ಜನ್ಯಕ್ಕೆ ಒಳಗಾದವರು, ಮಾನಸಿಕ ಮತ್ತು ಬೇರೆ ಯಾವುದೇ ನ್ಯೂನತೆಗಳನ್ನು ಹೊಂದಿರುವ, ರಕ್ಷಣಾ ಗ್ರಹ ಮನೋರೋಗಿಗಳ ಆಸ್ಪತ್ರೆಯಡಿ ಅಭಿ ರಕ್ಷೆಯಲ್ಲಿರುವವರು, ದೈಹಿಕ ವ್ಯಾಪಾರ ಅಥವಾ ಜೀತಕ್ಕೊಳಗಾದವರು ಅಲ್ಲದೆ ವಾರ್ಷಿಕ ಆದಾಯ 2ಲಕ್ಷ ಒಳಗಿನ ಎಲ್ಲ ಜಾತಿ, ಜನಾಂಗದವರಿಗೆ ಈ ಯೋಜನೆ ಲಭ್ಯ ಇದೆ.
ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸವನ್ನು ನ್ಯಾ. ಆಯ್ ಸಿ. ಭೂತಿ, ಸಿಪಿಐ ಜೆ. ಕರುಣೇಶಗೌಡ, ಯೋಜನಾಧಿಕಾರಿ ಶ್ರೀಮತಿ ಅನುರಾಧ ಹಾದಿಮನಿ ನೀಡಿದರು. ವೇದಿಕೆ ಮೇಲೆ ತೇರದಾಳ ಉಪತಹಶೀಲ್ದಾರ ಶ್ರೀಕಾಂತ ಮಾಯನ್ನವರ, ನ್ಯಾಯಾಧೀಶರಾದ ಶ್ರೀಕಾಂತ ಕುಲಕರ್ಣಿ, ಆರ್ ಎ. ಗೂಗಾಡೆ, ಎಲ್ ಎ. ಬನಾಜ್, ಎಸ್ ಎ. ಮಡಿವಾಳರ, ಮಂಜುನಾಥ ಕೌಜಲಗಿ ಉಪಸ್ಥಿತರಿದ್ದರು. ಪೋಲಿಸ್ ಸಿಬ್ಬಂದಿಗಳಾದ ವಾಯ್ ವಾಯ್. ಗಚ್ಚನ್ನವರ ನಿರೂಪಿಸಿ, ಜಗದೀಶ ಪಾಟೀಲ ಸ್ವಾಗತಿಸಿ, ಪಿಎ??? ವಿಜಯ ಎಸ್ ಕಾಂಬ್ಳೆ ವಂದಿಸಿದರು.