ದೇಶದ 6 ರಾಜ್ಯಗಳಲ್ಲಿ ಹೆಚ್ಚಿದ ಕೊರೋನಾ ಸೋಂಕು ಪ್ರಕರಣ
ನವದೆಹಲಿ, ಆಗಸ್ಟ್ 4 ದೇಶದ ಆರು ರಾಜ್ಯಗಳಲ್ಲಿ ಮತ್ತೆ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಅದರಲ್ಲೂ ವಿಶೇಷವಾಗಿ ಕೇರಳದಲ್ಲಿ ವಾರದ ಪಾಸಿಟಿವಿಟಿ ದರ ಶೇಕಡ 10 ಕ್ಕಿಂತ ಹೆಚ್ಚಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಕೇರಳದಲ್ಲಿ ಸೋಂಕು ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೆಲವು ಕಠಿಣ ನಿರ್ಬಂಧಗಳನ್ನು ವಿಧಿಸಲು ಮುಂದಾಗಿದೆ. ನೆನ್ನೆ ಈ ಸಂಬಂಧ ಉನ್ನತಮಟ್ಟದ ಅಧಿಕಾರಿಗಳ ಸಭೆಯಲ್ಲಿ ಕುರಿತು ಚರ್ಚೆ ನಡೆಸಲಾಗಿದೆ.
ಆರೋಗ್ಯ ಸಚಿವ ವೀಣಾ ಜಾರ್ಜ್ ಇಂದು ಕೊರೊನಾ ಸೋಂಕು ತಡೆಗಟ್ಟಲು ಕೆಲವು ಹೊಸ ನಿರ್ಬಂಧಗಳನ್ನು ಪ್ರಕಟಿಸಲಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ಈ ನಡುವೆ ಮೂರನೇ ಎಲೆ ಆಗಸ್ಟ್ ನಲ್ಲಿ ಆರಂಭವಾಗಿ ಬರುವ ಅಕ್ಟೋಬರ್ ವೇಳೆಗೆ ಸೋಂಕು ಪರಾಕಾಷ್ಠೆಗೆ ಮುಟ್ಟಲಿದೆ ಎಂದು ಆರೋಗ್ಯ ವಲಯದ ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ.
ಕೇರಳದಲ್ಲಿ ಈಗ ನಿತ್ಯ 20 ಸಾವಿರಕ್ಕಿಂತಲೂ ಹೆಚ್ಚು ಪ್ರಕರಣ ವರದಿಯಾಗುತ್ತಿದೆ. ಈ ನಡುವೆ ದೇಶಾದ್ಯಂತ ಕಳೆದ 24 ಗಂಟೆಗಳ ಅವಧಿಯಲ್ಲಿ 42,ಸಾವಿರದ 625 ಹೊಸ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ ಇದೇ ವೇಳೆ ಚಿಕಿತ್ಸೆ ಫಲಕಾರಿಯಾಗದೆ 562 ರೋಗಿಗಳು ಮೃತಪಟ್ಟಿದ್ದಾರೆ ಎಂದು ಇಲಾಖೆ ಮಾಹಿತಿ ನೀಡಿದೆ.