ಲಸಿಕಾಕರಣ ವೇಗ ಮತ್ತಷ್ಟು ಹೆಚ್ಚಿಸಿ: ಡಾ.ಕೆ.ಸುಧಾಕರ್

ಲಸಿಕಾಕರಣ ವೇಗ ಮತ್ತಷ್ಟು ಹೆಚ್ಚಿಸಿ: ಡಾ.ಕೆ.ಸುಧಾಕರ್

ಚಿಕ್ಕಬಳ್ಳಾಪುರ, ಆ.5  ಜಿಲ್ಲೆಯಾದ್ಯಂತ ಕೊರೊನಾ ಲಸಿಕಾಕರಣ ಮತ್ತಷ್ಟು ಹೆಚ್ಚಾಗಬೇಕು. ಆಗಸ್ಟ್ ಅಂತ್ಯದೊಳಗೆ ಮೊದಲನೇ ಡೋಸ್ ಲಸಿಕೆ ಶೇ.80 ರಷ್ಟು ಮತ್ತು ಸೆಪ್ಟೆಂಬರ್ ಅಂತ್ಯದೊಳಗೆ 2ನೇ ಡೋಸ್ ಲಸಿಕೆಯು ಶೇ.50ರಷ್ಟು ಪೂರ್ಣಗೊಳಿಸಬೇಕು ಎಂದು ಸಂಪುಟ ದರ್ಜೆ ಸಚಿವರಾದ ಡಾ.ಕೆ.ಸುಧಾಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
 
ಜಿಲ್ಲಾಡಳಿತ ಭವನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಕೋವಿಡ್-19 ಮುಂಜಾಗ್ರತಾ ಕ್ರಮಗಳು, ಮುಂಗಾರು ಕೃಷಿ ಬಿತ್ತನೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸಂಭವನೀಯ 3ನೇ ಅಲೆ ಬರುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ. ಈ ದಿಸೆಯಲ್ಲಿ ಜಿಲ್ಲಾಡಳಿತ ಮತ್ತಷ್ಟು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊರೊನಾ ಲಸಿಕೆ ಹಾಕಬೇಕಿದ್ದು, ಜಿಲ್ಲೆಯಾದ್ಯಂತ ಲಸಿಕಾಕರವು ಮತ್ತಷ್ಟು ವೇಗ ಪಡೆದುಕೊಳ್ಳಬೇಕಿದೆ. ದಿಸೆಯಲ್ಲಿ ಆರೋಗ್ಯ ಇಲಾಖೆ ಲಸಿಕಾ ಮೇಳಗಳನ್ನು ಹೆಚ್ಚು ಹೆಚ್ಚು ಆಯೋಜನೆ ಮಾಡಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಪ್ರಸ್ತುತ ಕೊರೊನಾ ನಿಯಂತ್ರಣದಲ್ಲಿದೆ. 106 ಮಾತ್ರ ಸಕ್ರಿಯ ಪ್ರಕರಣಳಿದ್ದು, ಪಾಸಿಟಿವಿಟಿ ದರವು ಶೇ.0.96ಕ್ಕೆ ಇಳಿಕೆಯಾಗಿದೆ. ಪ್ರತಿನಿತ್ಯ 5400 ಕೋವಿಡ್ ಪರೀಕ್ಷೆಗಳನ್ನು ಮಾಡುವ ಗುರಿ ಹಾಕಿಕೊಂಡಿದ್ದು, ಈ ಪೈಕಿ ದಿನಕ್ಕೆ 7-8 ಪಾಸಿಟೀವ್ ಪ್ರಕರಣಗಳು ಮಾತ್ರ ದಾಖಲಾಗುತ್ತಿವೆ. ಜಿಲ್ಲೆಯಾದ್ಯಂತ ಇದುವರೆಗೆ ಒಟ್ಟು 43,680 ಜನರಿಗೆ ಪಾಸಿಟೀವ್ ಬಂದಿದ್ದು, 43,154 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 3ನೇ ಅಲೆ ಮುಂಜಾಗ್ರತಾ ಕ್ರಮವಾಗಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದಿರಾ ಆರ್.ಕಬಾಡೆ ಅವರು ಮಾಹಿತಿ ನೀಡಿದರು.
ಜಿಲ್ಲೆಯಾದ್ಯಂತ 18 ವರ್ಷ ಮೇಲ್ಪಟ್ಟ ಎಲ್ಲಾ ವರ್ಗದವರಿಗೆ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ. ಈವರೆಗೆ ಜಿಲ್ಲೆಯ 6 ತಾಲೂಕುಗಳಲ್ಲಿ 6.10 ಲಕ್ಷ ಮಂದಿಗೆ ಲಸಿಕೆ ಹಾಕಲಾಗಿದೆ. ಕೆಲವು ಗ್ರಾಮೀಣ ಕಡೆಗಳಲ್ಲಿ ಎಷ್ಟೇ ಜಾಗೃತಿ ಮೂಡಿಸಿದರೂ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯ ಇತರೆ ತಾಲೂಕುಗಳಿಗೆ ಹೋಲಿಸಿದರೆ ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿ ಈ ಎರಡು ತಾಲೂಕುಗಳಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಇಲ್ಲಿ ಇನ್ನಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಗ್ರಾಮೀಣ ಪ್ರದೇಶದ ಜನರಿಗೆ ಕೊರೊನಾ ಮಾರ್ಗ ಸೂಚಿಗಳನ್ನು ಪಾಲಿಸುವಂತೆ ಜಾಗೃತಿ ಮೂಡಿಸಬೇಕು. ಹಳ್ಳಿಗಳಲ್ಲಿ ಯಾರಿಗಾದರೂ ಪಾಸಿಟಿವ್ ಬಂದರೆ ಆ ಮನೆಯ ಸುತ್ತ ಮುತ್ತಲ ಪ್ರದೇಶವನ್ನು ಕನಿಷ್ಟ 2 ವಾರಗಳ ಕಾಲ ಮೈಕ್ರೋ ಕಂಟೈನ್ ಮೆಂಟ್ ಜೋನ್ ಆಗಿ ಮಾಡಬೇಕು. ಕೆಲವು ಕಡೆ ಜನಪ್ರತಿನಿಧಿಗಳು ಸೇರಿದಂತೆ ಸಮಾಜ ಸೇವಕರು ಸಾರ್ವಜನಿಕರಿಗೆ ಆಹಾರ ಕಿಟ್ ಗಳನ್ನು ವಿತರಣೆ ಮಾಡುವ ಸಂದರ್ಭದಲ್ಲಿ ಕೊರೊನಾ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬ ದೂರುಗಳು ಬಂದಿವೆ. ಈ ದಿಸೆಯಲ್ಲಿ ತಹಸೀಲ್ದಾರ್ ಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆಹಾರ ಕಿಟ್ ಗಳ ವಿತರಣೆ ಸಂದರ್ಭದಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾದರೆ ನಿಮ್ಮನ್ನೆ ಹೊಣೆ ಮಾಡಲಾಗುವುದು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
3ನೇ ಅಲೆ ಹಿನ್ನಲೆಯಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕು. ಎಲ್ಲಾ ತಾಲೂಕುಗಳಲ್ಲಿ ಸಮರೋಪಾದಿಯಲ್ಲಿ ಲಸಿಕೆ ಹಾಕಬೇಕು. ನಮ್ಮ ಜಿಲ್ಲೆ ಗಡಿಯಲ್ಲಿ ಇರುವುದರಿಂದ ಬಾಗೇಪಲ್ಲಿ, ಗೌರಿಬಿದನೂರು ಹಾಗೂ ಚಿಂತಾಮಣಿ ತಾಲೂಕಿನ ಗಡಿ ಭಾಗದಲ್ಲಿ ಹೆಚ್ಚಿನ ನಿಗಾ ವಹಿಸಬೇಕು. ಚೆಕ್ ಪೋಸ್ಟ್ ಗಳನ್ನು ತೆರೆದು ಪ್ರತಿಯೊಬ್ಬರ ತಪಾಸಣೆ ಮಾಡಬೇಕು. ಆಂದ್ರದಲ್ಲಿ ಪ್ರಕರಣಗಳು ಹೆಚ್ಚು ಆದಲ್ಲಿ ಗಡಿಗಳನ್ನು ಸಂಪೂರ್ಣವಾಗಿ ಬಂದ್ ಮಾಡಬೇಕು. ಜಿಲ್ಲೆಯ ಪ್ರವಾಸಿ ತಾಣಗಳಾದ ನಂದಿಬೆಟ್ಟ, ಆವಲಬೆಟ್ಟಕ್ಕೆ ಪ್ರವಾಸಿಗರು, ಸಾರ್ವಜನಿಕರ  ಪ್ರವೇಶ ಸಂಪೂರ್ಣ ನಿರ್ಬಂಧ ಹೇರಬೇಕು. ಮದುವೆ ಸಭೆ ಸಮಾರಂಭಗಳಿಗೆ ನಿಗಧಿಪಡಿಸಿದ ಜನರಿಗಷ್ಟೇ ಅವಕಾಶ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರಿಗೆ ಸೂಚಿಸಿದರು.
 
ಜಂಟಿ ಕೃಷಿ ನಿರ್ದೇಶಕಿ ಎಲ್.ರೂಪ ಮಾತನಾಡಿ, ಪ್ರಸಕ್ತ ಮುಂಗಾರಿನಲ್ಲಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಆಗಸ್ಟ್ ಅಂತ್ಯದ ವೇಳೆಗೆ 271 ಮಿ.ಮೀ. ವಾಡಿಕೆಯಾಗಬೇಕಿತ್ತು. ಆದರೆ, 470 ಮಿ.ಮೀ. ಮಳೆಯಾಗುವ ಮೂಲಕ ಶೇ.73 ರಷ್ಟು ಹೆಚ್ಚುವರಿ ಮಳೆಯಾಗಿದೆ. ಸೆಪ್ಟೆಂಬರ್ ಅಂತ್ಯದವರೆಗೂ ಮುಂಗಾರು ಇರಲಿದ್ದು, ಈವರೆಗೆ ಶೇ.70 ರಷ್ಟು ಬಿತ್ತನೆಯಾಗಿದೆ. ಸೆ.15 ರವರೆಗೂ ಬಿತ್ತನೆಗೆ ಇನ್ನೂ ಅವಕಾಶವಿದ್ದು, ಮುಂಗಾರಿನಲ್ಲಿ ನೆಲಗಡಲೆ, ಮುಸುಕಿನ ಜೋಳ, ರಾಗಿ ಬಿತ್ತನೆ ಹೆಚ್ಚಾಗಿ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ರೈತರಿಗೆ ಅಗತ್ಯವಾದಷ್ಟು ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗಿದೆ. ಹಾಗಾಗಿ ಎಲ್ಲೂ ಕೂಡ ಡಿಎಪಿ ಸೇರಿದಂತೆ ಇತರೆ ರಸಗೊಬ್ಬರದ ಸಮಸ್ಯೆ ಇಲ್ಲ ಎಂದು ಸಚಿವರಿಗೆ ವಿವರಿಸಿದರು.
ಈ ವೇಳೆ ಪ್ರತಿಕ್ರಿಯಿಸಿದ ಸಚಿವರು, ಜಿಲ್ಲೆಯಲ್ಲಿ ಬೆಳೆ ವಿಮೆ ಹೆಚ್ಚಿಸಬೇಕು. ವಿಮಾ ಸೌಲಭ್ಯದ ಬಗ್ಗೆ ರೈತರಿಗೆ ಹೆಚ್ಚು ಜಾಗೃತಿ ಮೂಡಿಸಬೇಕು. ಅಧಿಕಾರಿಗಳು ರೈತರ ಬಳಿಗೆ ಹೋಗಿ ಯೋಜನೆ ಸೌಲಭ್ಯಗಳ ಬಗ್ಗೆ ತಿಳಿಹೇಳಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯಿತಿ ಸಿಇಒ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿ ಓದಿ