ಆಡಳಿತ ಮಂಡಳಿಯ ಪ್ರಾಮಾಣಿಕತೆಯಿಂದ ಸಂಸ್ಥೆ ಉತ್ತುಂಗಕ್ಕೆ
ಡಾ.ಕೆ.ಎಂ ಇಂದಿರೇಶ ಹೇಳಿಕೆ: ರಾಷ್ಟ್ರೋತ್ಥಾನ ರೈತ ಉತ್ಪಾದಕ ಕಂಪನಿಯ ಪ್ರಾರಂಭೋತ್ಸವ
ಮಹಾಲಿಂಗಪುರ 10: ಯಾವುದೇ ಆಡಳಿತ ಮಂಡಳಿ ಪ್ರಾಮಾಣಿಕ ಹಾಗೂ ಜವಾಬ್ದಾರಿಯುತವಾಗಿ ವರ್ತಿಸಿದಾಗ, ಸಂಸ್ಥೆಯು ತಾನಾಗಿಯೇ ಬೆಳೆದು, ಗ್ರಾಹಕರು ಇದೇ ಸಂಸ್ಥೆಯನ್ನು ಹುಡುಕಿಕೊಂಡು ಬರುತ್ತಾರೆ ಎಂದು ಬಾಗಲಕೋಟ ತೋಟಗಾರಿಕಾ ಇಲಾಖೆಯ ಕುಲಪತಿಗಳಾದ ಡಾ.ಕೆ.ಎಂ ಇಂದಿರೇಶ ಹೇಳಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ರಾಷ್ಟ್ರೋತ್ಥಾನ ರೈತ ಉತ್ಪಾದಕ ಕಂಪನಿ ಮತ್ತು ಕರ್ನಾಟಕ ಜಾನಪದ ಪರಿಷತ್ ಇವುಗಳ ಸಹಯೋಗದಲ್ಲಿ ಗ್ರಾಮೀಣ ಕೃಷಿ ಮೇಳ, ಜಾನಪದ ಜಾತ್ರೆ ಹಾಗೂ ರಾಷ್ಟ್ರೋತ್ಥಾನ ರೈತ ಉತ್ಪಾದಕ ಕಂಪನಿಯ ಪ್ರಾರಂಭೋತ್ಸವ ಸಮಾರಂಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ರೈತ ಉತ್ಪಾದಕ ಸಂಸ್ಥೆಗಳು ರೈತರ ಆದಾಯವನ್ನು ದ್ವಿಗುಣಗೊಳಿಸುವ ಸಂಸ್ಥೆಯಾಗಿವೆ.
ಈಗ ಮಾರುಕಟ್ಟೆಯಲ್ಲಿ ಕಲಬೆರಕೆ ಆಹಾರ ಪದಾರ್ಥಗಳ ಹಾವಳಿ ಹೆಚ್ಚಾಗಿದೆ. ಜನರಿಗೆ ಶುದ್ಧ ಆಹಾರ ಪದಾರ್ಥಗಳ ಅವಶ್ಯಕತೆ ಇದೆ. ಆದ್ದರಿಂದ ರೈತರು ಇಂತಹ ಅವಕಾಶಗಳನ್ನು ಬಳಸಿಕೊಂಡು ತಾವು ಬೆಳೆದ ವಸ್ತುಗಳನ್ನು ಉದಾ : ಹರಿಶಿಣವನ್ನು ತಾವೇ ಮನೆಯಲ್ಲಿ ಪುಡಿಮಾಡಿ ಅದಕ್ಕೆ ತೋಟಗಾರಿಕಾ ಇಲಾಖೆಯ ಸರಳ ಅನುಮತಿಯ ತಮ್ಮದೇಯಾದ ಹೆಸರಿನ (ಬ್ರಾಂಡ್) ನೊಂದಿಗೆ ತಮ್ಮೂರಿನಲ್ಲಿಯೇ ಇರುವರಾಷ್ಟ್ರೋತ್ಥಾನ ರೈತ ಉತ್ಪಾದಕ ಕಂಪನಿಗಳಲ್ಲಿ ಮಾರಿದಾಗ ತಮಗೆ ಪ್ರತಿಶತ 70ರಿಂದ 80ರಷ್ಟು ಮಧ್ಯವರ್ತಿಗಳ ಹಾವಳಿ ಇಲ್ಲದೇ ಹೆಚ್ಚಿನ ಆದಾಯ ದೊರಕುತ್ತದೆ ಎಂದರು.
ಬಾಗಲಕೋಟ ಜಿಲ್ಲೆಯ ಒಂದು ಗ್ರಾಮದಲ್ಲಿ ಮಹಿಳೆ 1ಎಕರೆ 10ಗುಂಟೆ ಜಾಗೆಯಲ್ಲಿ ಸ್ವಾವಲಂಬಿಯಾಗಿ ವಿವಿಧ ಬೆಳೆಗಳನ್ನು ಬೆಳೆದು ವರ್ಷಕ್ಕೆ 8ಲಕ್ಷ ರೂಪಾಯಿಗಳ ಆದಾಯ ಪಡೆಯುತ್ತಿದ್ದು ಅವರನ್ನು ಇತ್ತೀಚೆಗೆ ತೋಟಗಾರಿಕೆ ಇಲಾಖೆ ವತಿಯಿಂದ ಅವರಿಗೆ ಗೌರವ ಸನ್ಮಾನವನ್ನು ಕೂಡ ನೀಡಲಾಗಿದೆ.
ಈ ಭಾಗದಲ್ಲಿ ನೀರಿನ ಪ್ರಮಾಣ ಹೆಚ್ಚಿರುವುದರಿಂದ ಇಲ್ಲಿಯ ಮಹಿಳೆಯರೂ ಕೂಡ ಗೌರವ ಪಡೆದ ಮಹಿಳೆಯನ್ನು ಆದರ್ಶವಾಗಿಟ್ಟುಕೊಂಡು ಸ್ವಾವಲಂಬಿಗಳಾಗಿ ಕೃಷಿಯಲ್ಲಿ ತೊಡಗಿ ಎಂದು ಕರೆ ಕೊಟ್ಟರು.
ದಿವ್ಯ ಸಾನಿಧ್ಯ ವಹಿಸಿದ ಗೋಕಾಕಿನ ಪ.ಪೂ. ಮುರುಘರಾಜೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿ ರೈತ ಹಾಗೂ ಜಾನಪದ ಒಂದೇ ನಾಣ್ಯದ ಎರಡು ಮುಖಗಳು, ಇದು ಶ್ರದ್ಧೆ, ನಿಷ್ಟೇ, ಸಂಸ್ಕೃತಿ ಹಾಗೂ ಇತಿಹಾಸವನ್ನು ತಿಳಿಸುತ್ತದೆ. ಜೈ ಜವಾನ್ ಜೈ ಕಿಸಾನ್ ಜೊತೆಗೆ ಶಿಕ್ಷಕ ಹಾಗೂ ದೇಶದ ಪ್ರಜೆಗಳು ಅವರವರ ಜವಾಬ್ದಾರಿಗಳನ್ನು ಅರಿತರೆ ಜಗತ್ತಿಗೆ ಭಾರತ ದೇಶ ಗುರುವಾಗುತ್ತದೆ ಎಂದರು.
ಕಂಕನವಾಡಿ ಮಾರುತಿ ಶರಣರು ಮಾತನಾಡಿ ಈ ಆಧುನಿಕ ಯುಗದಲ್ಲಿ ಯುವಕರು ಕೃಷಿಯನ್ನು ಪ್ರೀತಿಸುವವರಾಗಿ, ಸತ್ಯಶುದ್ಧ ಕಾಯಕದಲ್ಲಿ ಭಗವಂತನಿದ್ದಾನೆ ಎಂದು ಬಸವಾದಿ ಶರಣ ಮೋಳಿಗೆ ಮಾರಯ್ಯನವರ ವಚನವನ್ನು ಹೇಳಿ ಯುವಕರಲ್ಲಿ ಉತ್ಸಾಹ ತುಂಬಿದರು.
ಈ ಕೃಷಿಮೇಳದಲ್ಲಿ 50ಕ್ಕೂ ಹೆಚ್ಚು ವಿವಿಧ ಕಂಪನಿಗಳು ಪಾಲ್ಗೊಂಡಿದ್ದವು. ಶಿಕ್ಷಕ ಬಸವರಾಜ ಮೇಟಿ ಪ್ರಾಸ್ತಾವಿಕ ನುಡಿಗಳನ್ನಾಡಿ, ವಿಸ್ತೀರಣಾ ನಿರ್ದೇಶಕರಾದ ಡಾ.ಎಸ್.ಆಯ್. ಅಥಣಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಡಾಕ್ಟರೇಟ್ ಪಡೆದ ಈಶ್ವರ ಪಟ್ಟಣಶೆಟ್ಟಿ ಹಾಗೂ ಮಹಾಂತೇಶ ಪಟ್ಟಣಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.
ವೇದಿಕೆ ಮೇಲೆ ನಬಾರ್ಡ್ ಶ್ರೀಮತಿ ಯಮುನಾ ಪೈ, ತೋಟಗಾರಿಕೆ ಇಲಾಖೆಯ ಶ್ರೀಪಾದ್ ವಿಶ್ವೇಶ್ವರ, ಅಭಯಕುಮಾರ್ ದೇಸಾಯಿ, ಜಾನಪದ ಸಾಹಿತ್ಯ ಪರಿμÀತ್ತಿನ ಶಿವಾನಂದ್ ಶೆಲ್ಲಿಕೇರಿ, ಸಹಕಾರ ಸಂಘಗಳ ಎಸ್ಆರ್ ಬಾಡಗಿ, ಎಸ್ ಎಂ ಪಾಟೀಲ್ ಟಿ.ಎಂ ಡಾಂಗೆ, ಗೋಪಾಲ್ ಮಾಂಗ, ಸಂಜು ಬಾರ್ಕೋಲ್, ವಿಶಾಲಗೌಡ ಪಾಟೀಲ್, ಜಯರಾಮ್ ಶೆಟ್ಟಿ, ಶಿವಲಿಂಗ ಸಿದ್ನಾಳ, ಯರಗಟ್ಟಿ, ಭದ್ರಶೆಟ್ಟಿ, ಡಾ. ರಾಜಕುಮಾರ್ ಮನಹಳ್ಳಿ, ಚಂದ್ರಶೇಖರ್ ಬೋಸಾಳೆ,ಮಹಾಲಿಂಗ ವಡರಟ್ಟಿ, ಸತೀಶ್ ಪಟ್ಟಣಶೆಟ್ಟಿ, ಸಚಿನ್ ಪಟ್ಟಣಶೆಟ್ಟಿ, ಸದಾಶಿವ ಹಿರೇಮಠ, ಮಹಾಂತೇಶ ನಾವಿ ಮುಂತಾದವರಿದ್ದರು.
ಬಸವ ಚೈತನ್ಯ ಐಟಿಐ ಶಾಲೆಯ ಕಾರ್ಯಾಧ್ಯಕ್ಷ ಡಿ.ಎಸ್ ಪಟ್ಟಣಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಶ್ರೀಕಾಂತ್ ದೇಶಪಾಂಡೆ ಸ್ವಾಗತಿಸಿ, ಮಲ್ಲು ಲೋಕುರೆ ನಿರೂಪಿಸಿ, ಪಿಡಿಓ ಕುಲಗೂಡ ವಂದಿಸಿದರು.