ಕೆ.ಬಿ.ಕೋಳಿವಾಡರ ಸಭಾ ಭವನ - ಕಾಂಗ್ರೆಸ್ ಕಚೇರಿ ಲೋಕಾರ್ಪಣೆ
ರಾಣೇಬೆನ್ನೂರು 01: ಹಿರಿಯ ಮುತ್ಸದ್ದಿ ರಾಜಕಾರಣಿ ವಿಧಾನಸಭಾ ಮಾಜಿ ಸಭಾಪತಿ ಶ್ರೀ ಕೆ.ಬಿ.ಕೋಳಿವಾಡ ರವರ ಹುಟ್ಟು ಹಬ್ಬ ಅದ್ಧೂರಿ ಕನ್ನಡ ರಾಜ್ಯೋತ್ಸವ ಹಾಗೂ ಕೋಳಿವಾಡ ಸಭಾ ಭವನ ತಾಲೂಕಾ ಕಾಂಗ್ರೆಸ್ ಪಕ್ಷದ ಕಚೇರಿ ಲೋಕಾರ್ಪಣೆ ಸಮಾರಂಭವು ನ.1ರಂದು ಬೆಳಗ್ಗೆ 9.30ಕ್ಕೆ ಜರುಗಲಿದೆ ಎಂದು ನಗರಸಭಾ ಸದಸ್ಯ ಪಿ.ಜೆ.ಮರಿಯಮ್ಮನವರ ಹೇಳಿದರು.
ಅವರು ಶುಕ್ರವಾರ ಕೆಬಿಕೆ ಗೃಹಸಭಾದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಸೋಮವಾರ ಬೆಳಗ್ಗೆ 9.30ಕ್ಕೆ ವಿನಾಯಕ ನಗರದ ವಿನಾಯಕಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ನೂತನವಾಗಿ ನಿರ್ಮಿಸಲಾದ ಕೆ.ಬಿ.ಕೋಳಿವಾಡ ಸಭಾ ಭವನದ ಆವರಣದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಗುವುದು. ನಂತರ ವೆಂಕಟೇಶ್ವರ ದೇವಸ್ಥಾನ ಸೇರಿದಂತೆ ಅನೇಕ ದೇವಾಲಯಗಳಿಗೆ ಭೇಟಿ ನೀಡಿ ದರ್ಶನಾಶೀರ್ವಾದ ಪಡೆದು ಸರಕಾರಿ ಆಸ್ಪತ್ರೆಗೆ ತೆರಳಿ ಅಲ್ಲಿನ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡುವರು.
ನಂತರ ಬೆಳಗ್ಗೆ 10.30ಕ್ಕೆ ಸಭಾ ಭವನದ ಹಾಗೂ ಕಾಂಗ್ರೆಸ್ ಪಕ್ಷದ ಕಚೇರಿಯ ಲೋಕಾರೆ್ಣ ಸಮಾರಂಭ ಜರುಗುವುದು. ಈ ಸಮಾರಂಭಕ್ಕೆ ಜಿಲ್ಲೆಯ ಎಲ್ಲ ಮಾಜಿ ಸಚಿವರು, ಮಾಜಿ ಶಾಸಕರು ಹಾಗೂ ಪಕ್ಷದ ಹಿರಿಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಕೆಪಿಸಿಸಿ ಸದಸ್ಯ ಬಸನಗೌಡ ಮರದ ಮಾತನಾಡಿ, ಕೆ.ಬಿ.ಕೋಳಿವಾಡರ ಸಭಾ ಭವನ ಹಾಗೂ ತಾಲೂಕಾ ಕಾಂಗ್ರೆಸ್ ಪಕ್ಷದ ಕಚೇರಿಯ ಉದ್ಘಾಟನೆಯನ್ನು ರಾಜ್ಯ ರಾಷ್ಟ್ರ ಮಟ್ಟದ ನಾಯಕರನ್ನು ಆಮಂತ್ರಿಸಿ ಅದ್ಧೂರಿಯಾಗಿ ನೆರವೇರಿಸುವ ವಿಚಾರವಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಅದ್ಧೂರಿಗೆ ಆದ್ಯತೆ ನೀಡದೆ ಸಾಂಕೇತಿಕವಾಗಿ ಕೋಳಿವಾಡ ರವರ ಹುಟ್ಟು ಹಬ್ಬ ಹಾಗೂ ರಾಜ್ಯೋತ್ಸವದ ಶುಭದಿನದಂದೇ ನೆರವೇರಿಸಲು ತೀರ್ಮಾನಿಸಿದ್ದು, ತಾಲೂಕಿನ ಪಕ್ಷದ ಮುಖಂಡರು, ಕೋಳಿವಾಡರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೋರಿದರು.
ಮಾಧ್ಯಮಗೋಷ್ಠಿಯಲ್ಲಿ ಎಪಿಎಂಸಿ ಅಧ್ಯಕ್ಷ ಬಸವರಾಜ ಸವಣೂರ, ಜಿಪಂ ಮಾಜಿ ಅಧ್ಯಕ್ಷ ಏಕನಾಥ ಬಾನುವಳ್ಳಿ, ತಾಲೂಕಾ ಕಾಂಗ್ರೆಸ್ ಅಧ್ಯಕ್ಷ ಮಂಜನಗೌಡ ಪಾಟೀಲ, ನಗರ ಘಟಕದ ಅಧ್ಯಕ್ಷ ಶೇರೂಖಾನ್ ಕಾಬೂಲಿ, ಮುಖಂಡರಾದ ವೀರನಗೌಡ ಪೊಲೀಸಗೌಡ್ರ, ರಾಜಣ್ಣ ಮೋಟಗಿ, ಕೃಷ್ಣಪ್ಪ ಕಂಬಳಿ, ರಾಮಣ್ಣ ಲಮಾಣಿ, ಯಲ್ಲಪ್ಪ ರಡ್ಡೇರ, ಕೆ.ಡಿ.ಸಾವಕಾರ ಮತ್ತಿತರರು ಉಪಸ್ಥಿತರಿದ್ದರು.