ಅಪರಿಚಿತ ವ್ಯಕ್ತಿಗಳು ಬಗ್ಗೆ ಸಂಶಯ ಬಂದಲ್ಲಿ ಠಾಣೆಗೆ ಕರೆ ಮಾಡಿ: ಪ್ರವೀಣ ಬಿಳಿಗಿ
ಮಹಾಲಿಂಗಪುರ 06: ಅಪರಿಚಿತ ವ್ಯಕ್ತಿಗಳು ಮನೆ ಅಥವಾ ಗಲ್ಲಿಗಳಲ್ಲಿ ತಿರುಗಾಡುತ್ತಿದ್ದಲ್ಲಿ ಅವರ ಬಗ್ಗೆ ಪೂರ್ವಾಪರ ವಿಚಾರಿಸುವುದು ಮತ್ತು ಅಂತಹವರ ಬಗ್ಗೆ ತಮಗೆ ಸಂಶಯ ಬಂದಿದ್ದೆ ಆದರೆ ಪೋಲೀಸ್ ಸ್ಟೇಷನ್ ಗೆ ಕರೆ ಮಾಡಿ ಮಾಹಿತಿ ನೀಡಬೇಕೆಂದು ಸ್ಥಳೀಯ ಠಾಣಾಧಿಕಾರಿ ಪ್ರವೀಣ ಬಿಳಿಗಿ ಸಾರ್ವಜನಿಕರನ್ನು ಕೋರಿದ್ದಾರೆ.
ಬಾಗಲಕೋಟ ಜಿಲ್ಲಾ ಪೊಲೀಸ್ ಹಾಗೂ ರಬಕವಿ/ಬನಹಟ್ಟಿ ವೃತ್ತ ಇತ್ತಿಚೆಗೆ ಮಹಾಲಿಂಗಪುರ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಪರಾಧ ತಡೆಗಟ್ಟುವ ಮುನ್ನಚ್ಚರಿಕೆ ಸಲುವಾಗಿ ಮುದ್ರಿತ ಕರ ಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮಹಾಲಿಂಗಪುರ ಪಟ್ಟಣ ಹೊಂದಿರುವ ಸರ ಹದ್ದಿಗಿಂತ ಆಚೆಯೂ ಜನ ವಸತಿ ಮತ್ತು ಅಂಗಡಿ ಮುಂಗಟ್ಟುಗಳಿಗೆ ಇಲಾಖೆಯಿಂದ ಕಣ್ಗಾವಲು ಇರಿಸಲಾಗಿದೆ.ಆದರೂ ಸಹಿತ ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ಪೋಲೀಸ್ ಇಲಾಖೆಯ ಜೊತೆಗೆ ಸಹಕರಿಸಬೇಕಾಗಿದೆ ಎಂದರು.
ಎಚ್ಚರಿಕೆ ವಹಿಸಬೇಕಾದ ಅಂಶಗಳು : ಪರ ಊರಿಗೆ ಹೋಗುವಾಗ ನಂಬಿಕಸ್ಥರಿಗೆ ನಿಗಾ ಇಡಲು ತಿಳಿಸಬೇಕು ನೆರೆ ಹೊರೆಯವರೆ ಪ್ರಾಥಮಿಕ ಹಂತದಲ್ಲಿ ತಮಗೆ ಸುರಕ್ಷತೆ ನೀಡುವರು. ರಾತ್ರಿ ಅಥವಾ ಹಗಲು ಹೊತ್ತಲ್ಲಿ ಪರಿಚಿತ, ಅಪರಿಚಿತರ ಬಗ್ಗೆ ತಿಳಿದು ಮನೆಯೊಳಗೆ ಪ್ರವೇಶ ಕೊಡಿ ಇದರಿಂದ ಆಘಾತಕಾರಿ ಘಟನೆಗಳು ಕಡಿಮೆಯಾಗುತ್ತವೆ. ಅಗತ್ಯಕ್ಕಿಂತ ಹೆಚ್ಚಿರುವ ಚಿನ್ನ, ಬೆಳ್ಳಿ, ಹಣವನ್ನು ಬ್ಯಾಂಕ್ ಗಳ ಸೇಫ್ ಲಾಕರ್ ಗಳಲ್ಲಿಟ್ಟು ನೆಮ್ಮದಿ ಜೀವನ ಸಾಗಿಸಿ.ವಿನಾಕಾರಣ ಸಾರ್ವಜನಿಕ ಸ್ಥಳಗಳಲ್ಲಿ ಹಣ ಎಣಿಸುವುದಾಗಲಿ, ಬೆಳ್ಳಿ, ಬಂಗಾರದ ಆಭರಣಗಳನ್ನು ಧರಿಸಿ ಓಡಾಟ ಮಾಡುವುದಾಗಲಿ ಮಾಡಬಾರದು ಇದರಿಂದ ನಿಮಗೆ ಅಪಾಯ ತಪ್ಪಿದ್ದಲ್ಲ. ಮನೆ ಸುತ್ತಮುತ್ತ ಬೆಳಕಿನ ವ್ಯವಸ್ಥೆ ಮಾಡಿ, ಬಾಗಿಲುಗಳಿಗೆ ಇಂಟರ್ ಲಾಕ್ ಅಳವಡಿಸಿ ಸುರಕ್ಷಿತವಾಗಿರಿ. ಕಿಡಕಿ ಹತ್ತಿರ ಕೈಗೆ ತಾಗುವಂತೆ ವಸ್ತುಗಳನ್ನು ಇಡಬಾರದು ಇಟ್ಟಲ್ಲಿ ಕಳುವು ಪ್ರಕರಣಗಳಿಗೆ ಸಹಕರಿಸಿದಂತೆಯೇ ಸರಿ. ಸೈಕಲ್, ಮೋಟಾರ್ ಬೈಕ್ ಗಳನ್ನು ಲಾಕ್ ಮಾಡಿ ನಿಮ್ಮ ಮನೆ ಆವರಣದಲ್ಲಿ ನಿಲ್ಲಿಸಬೇಕು, ಕೆಲಸದಾಳುಗಳು, ಆಭರಣ ಸ್ವಚ್ಛ ಮಾಡುವವರು, ಕಡಿಮೆ ದರದಲ್ಲಿ ಬೆಳ್ಳಿ, ಬಂಗಾರ ನೀಡುವವರ ಬಗ್ಗೆ ಹಾಗೂ ಅಪರಿಚಿತ ಬಾಡಿಗೆದಾರರ ಬಗ್ಗೆಯೂ ಎಚ್ಚರಿಕೆ ಇರಲಿ. ವ್ಯಾಪಾರಸ್ಥರು, ಹೊಟೆಲ್ ಮಾಲಿಕರು, ಬ್ಯಾಂಕ್ ಗಳಲ್ಲಿ ಸಿಸಿ ಕ್ಯಾಮರಾ ಮತ್ತು ಬರ್ಗಲರ್ ಅಲಾರಾಂಗಳನ್ನು ಅಳವಡಿಸಿ ಪಾರದರ್ಶಕವಾಗಿರಿ.
ಯಾವುದೇ ಅಪರಾಧ ಪ್ರಕರಣಗಳಿರಲಿ ತುರ್ತಾಗಿ 08350-270033, ಮೋ.ನಂ.9480803961 ಗಳಿಗೆ ಕರೆ ಮಾಡಿ ಪಟ್ಟಣದಲ್ಲಿ ನೆಮ್ಮದಿ ವಾತಾವರಣ ನಿರ್ಮಾಣಕ್ಕೆ ಸಹಕರಿಸಿ ಎಂದು ಕರೆ ನೀಡಿದರು.