ಅಕ್ರಮ ಪಡಿತರ ಅಕ್ಕಿ ಸಾಗಾಟ ಪತ್ತೆ; ಇಬ್ಬರು ಲಾರಿ ಚಾಲಕರ ಬಂಧನ
ಕೊಲ್ಹಾರ 08: ಸರ್ಕಾರದ ನಾನಾ ಯೋಜನೆಗಳಡಿ ಬಡವರಿಗೆ ತಲುಪಬೇಕಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಬಹುದೊಡ್ಡ ಜಾಲವನ್ನು ಕೂಡಗಿ ಎನ್ಟಿಪಿಸಿ ಪೊಲೀಸರು ಭೇದಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ-50ರ ಕೂಡಗಿ ಕ್ರಾಸ್ನಲ್ಲಿ ಮಂಗಳವಾರ ಕಾರ್ಯಾಚರಣೆ ನಡೆಸಿದ ಪೊಲೀಸರು, ಬರೋಬ್ಬರಿ 33.83 ಟನ್ ಅಕ್ರಮ ಅಕ್ಕಿ ಸಹಿತ ಲಾರಿಯನ್ನು ಜಪ್ತಿ ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ತಮಿಳುನಾಡು ಮೂಲದ ಕುಮಾರ ಎಂ. ಮುನಿಯಪ್ಪನ್ (47) ಹಾಗೂ ಬಾಲಾಜಿ ಡಿ. ದುರೈರಾಜಾ (35) ಎಂಬ ಇಬ್ಬರು ಲಾರಿ ಚಾಲಕರನ್ನು ಪೊಲೀಸರು ತಕ್ಷಣವೇ ಬಂಧಿಸಿ ಕಂಬಿ ಎಣಿಸುವಂತೆ ಮಾಡಿದ್ದಾರೆ. ಕಾಳಸಂತೆಯಲ್ಲಿ ಮಾರಾಟದ ಸಂಚು:ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಪೊತ್ನಾಳದಲ್ಲಿರುವ ‘ಲಕ್ಷ್ಮೀ ವೆಂಕಟೇಶ್ವರ ಟ್ರೇಡರ್ಸ’ನಿಂದ ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ಈ ಅಕ್ಕಿಯನ್ನು ಲೋಡ್ ಮಾಡಿಕೊಳ್ಳಲಾಗಿತ್ತು.
ಮಹಾರಾಷ್ಟ್ರದ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಿ ಅಕ್ರಮವಾಗಿ ಕೋಟಿ ಕೋಟಿ ಹಣ ಗಳಿಸುವ ದುರುದ್ದೇಶ ಇದರ ಹಿಂದಿತ್ತು ಎನ್ನಲಾಗಿದೆ. ಖಚಿತ ಮಾಹಿತಿ ಆಧರಿಸಿ ಕೂಡಗಿ ಕ್ರಾಸ್ನಲ್ಲಿ ದಾಳಿ ನಡೆಸಿದ ಪೊಲೀಸರು, ಲಾರಿಯನ್ನು ತಡೆದು ಪರೀಶೀಲಿಸಿದಾಗ ಈ ಅಕ್ರಮ ಬಯಲಾಗಿದೆ.ರೂ. 9.81 ಲಕ್ಷ ಮೌಲ್ಯದ ಅಕ್ಕಿ ಜಪ್ತಿ:ಲಾರಿಯಲ್ಲಿದ್ದ 685 ಪ್ಲಾಸ್ಟಿಕ್ ಚೀಲಗಳಲ್ಲಿದ್ದ ಒಟ್ಟು 33,830 ಕೆ.ಜಿ. (33.83 ಟನ್) ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ. ಜಪ್ತಿಯಾದ ಅಕ್ಕಿಯ ಅಂದಾಜು ಮೌಲ್ಯ 9,81,070 ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಶಪಡಿಸಿಕೊಂಡ ಅಕ್ಕಿಯನ್ನು ತಕ್ಷಣವೇ ಬಸವನ ಬಾಗೇವಾಡಿ ಆಹಾರ ಇಲಾಖೆಯ ವಶಕ್ಕೆ ಒಪ್ಪಿಸಲಾಗಿದ್ದು, ಸಾಗಾಟಕ್ಕೆ ಬಳಸಿದ್ದ ಬೃಹತ್ ಲಾರಿಯನ್ನೂ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಕೊಲ್ಹಾರ ಆಹಾರ ನೀರೀಕ್ಷಕ ಎಂ.ಎಸ್. ಗುತ್ತರಗಿ ನೀಡಿದ ದೂರಿನನ್ವಯ ಕೂಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಕ್ರಮ ಜಾಲದ ಹಿಂದಿರುವ ಪ್ರಭಾವಿ ಕೈಗಳ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.