ರಾಮದುರ್ಗ

ಅನ್ನದಾತರನ್ನು ಕಡೆಗಣಿಸಿದರೆ ಆಹಾರಕ್ಕಾಗಿ ಕ್ರಾಂತಿಯಾದೀತು

ಅನ್ನದಾತರನ್ನು ಕಡೆಗಣಿಸಿದರೆ ಆಹಾರಕ್ಕಾಗಿ ಕ್ರಾಂತಿಯಾದೀತು

ರಾಮದುರ್ಗ ಡಿಸೆಂಬರ್ 23: ಒಕ್ಕಲುತನ ಎಂಬುದು ಕಠಿಣ ಕಾಯಕವಾಗಿದೆ. ರೈತ ಪ್ರಾಮಾಣಿಕವಾಗಿ ಮಣ್ಣಲ್ಲಿ ಮಣ್ಣಾಗಿ ದುಡಿದು ದೇಶಕ್ಕೆ ಅನ್ನ ನೀಡುವ ರೈತರ ಬಗ್ಗೆ ನಮ್ಮನ್ನಾಳುವ ಸರಕಾರಗಳು ಕಿಂಚಿತ್ತು ಗಮನ ಹರಿಸುತ್ತಿಲ್ಲ. ಅನ್ನದಾತರನ್ನು ಕಡೆಗಣಿಸಿದರೆ ಮುಂದಿನ ದಿನಗಳಲ್ಲಿ ಆಹಾರಕ್ಕಾಗಿ ಕ್ರಾಂತಿ ಆದೀತು ಎಂದು ಕಟಕೋಳದ ವಿರಕ್ತಮಠದ ಸಚ್ಚಿದಾನಂದ ಸ್ವಾಮೀಜಿ ಎಚ್ಚರಿಸಿದರು.

ಸ್ಥಳೀಯ ತಾ.ಪಂ. ಸಭಾಭವನದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ರಾಮದುರ್ಗ ಹಾಗೂ ಜುನಿಪೇಟ ಶಾಖೆಗಳು ಜಂಟಿಯಾಗಿ ಹಮ್ಮಿಕೊಂಡ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶ್ರದ್ಧೆಯಿಂದ ಭೂಮಿಯಲ್ಲಿ ಕೆಲಸ ಮಾಡಿದರೆ ಬೇಕಾದಷ್ಟು ಆದಾಯ ಸಂಪಾದಿಸಲು ಸಾಧ್ಯವಿದೆ ಎಂದು ಹೇಳಿದರು.

ಎಸ್ಬಿಐ ಬೆಳಗಾವಿ ಪ್ರಾದೇಶಿಕ ವ್ಯವಹಾರ ಕಚೇರಿಯ ಮುಖ್ಯ ವ್ಯವಸ್ಥಾಪಕ ಭೀಮಸೇನ್ ಗುಮಾಸ್ತೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತೀಯ ಸ್ಟೇಟ್ ಬ್ಯಾಂಕು ರೈತ ವರ್ಗಕ್ಕೆ ಹೆಚ್ಚು ಆದ್ಯತೆ ನೀಡುತ್ತಿದೆ. ಕೃಷಿ ಚಟುವಟಿಕೆಗೆ ಅಗತ್ಯ ಇರುವ ಸಾಲಸೌಲಭ್ಯಗಳನ್ನು ಒದಗಿಸಲು ಬ್ಯಾಂಕು ಬದ್ಧವಾಗಿದೆ.  ಒಂದು ವೇಳೆ ಸಾಲಗಾರರು ಆಥರ್ಿಕ ಸಂಕಷ್ಟಕ್ಕೆ ಒಳಗಾಗಿ ಪಡೆದ ಸಾಲ ಮರುಪಾವತಿಸಲು ಅಸಾಧ್ಯವಾಗಿ ಸುಸ್ತಿ ಸಾಲಗಾರರಾದಾಗ ಏಕಕಾಲದಲ್ಲಿ ಸಾಲ ಇತ್ಯರ್ಥ ಯೋಜನೆ (ಓಟಿಎಸ್) ಮೂಲಕ ಇತ್ಯರ್ಥ ಪಡಿಸಿಕೊಳ್ಳಲು ಮೊದಲ ಅವಕಾಶ ನೀಡಿದ್ದು ಎಸ್ಬಿಐ ಎಂದು ಹೇಳಿದರು.

ಎಸ್ಬಿಐ ಸ್ಥಳೀಯ ಶಾಖಾ ವ್ಯವಸ್ಥಾಪಕ ಅಲ್ಲಪ್ಪ ಲಕ್ಷಟ್ಟಿ ಪ್ರಾಸ್ತಾವಿಕ ಮಾತನಾಡಿ, ಎಸ್ಬಿಐನಲ್ಲಿ ಕಟಬಾಕಿ ಇರುವ ಸಾಲದಲ್ಲಿ ಶೇ.15 ರಿಂದ ಶೇ.90ರ ವರೆಗೆ ಭಾರಿ ರಿಯಾಯತಿ ಸೌಲಭ್ಯ ಒದಗಿಸಲಾಗುತ್ತಿದ್ದು, 2021 ಜ.31ರವರೆಗೆ   ಓಟಿಎಸ್ ಸೌಲಭ್ಯ ಚಾಲ್ತಿಯಲ್ಲಿರುತ್ತದೆ. ಹಾಗಾಗಿ ಸುಸ್ತಿ ಸಾಲಗಾರರು ಯೋಜನೆ ಸದುಪಯೋಗ ಪಡಿಸಿಕೊಂಡು ಸಾಲದಿಂದ ಋಣಮುಕ್ತರಾಗಬೇಕೆಂದು ಅವರು ತಿಳಿಸಿದರು.

ಮಣ್ಣು ಆರೋಗ್ಯ ಕುರಿತು ಸಹಾಯಕ ಕೃಷಿ ನಿರ್ದೇಶಕ ಎಸ್.ಎಫ್.ಬೆಳವಟಗಿ, ಸಾಮಾಜಿಕ ಭದ್ರತಾ ಯೋಜನೆಗಳು ಕುರಿತು ಅಮೂಲ್ಯ ಆಥರ್ಿಕ ಸಾಕ್ಷರತೆ ಕೇಂದ್ರ ಸಮಾಲೋಚಕ ಮಲ್ಲಿಕಾರ್ಜುನ್ ಗೊಂದಿ ಉಪನ್ಯಾಸ ನೀಡಿದರು. 

ಪಿ.ಎಸ್.ಐ ನಾಗನಗೌಡ ಕಟ್ಟಿಮನಿಗೌಡ್ರ, ರೈತ ಮುಖಂಡರಾದ ಶಿವಾನಂದ ದೊಡವಾಡ, ಜಗದೀಶ ದೇವರಡ್ಡಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಾಧಕ ರೈತರನ್ನು ಸನ್ಮಾನಿಸಿ ಗೌರವಿಸಲಾಯಿತು. 

ರೈತ ಮಹಿಳೆ ಯಲ್ಲವ್ವ ಗಿರಿಯನ್ನವರ, ಮಲ್ಲಿಕಾರ್ಜುನ್  ರಾಮದುರ್ಗ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.

ಕೃಷಿ ಅಭಿವೃದ್ಧಿ ಅಧಿಕಾರಿ ಸಿದ್ದಣ್ಣ ಸ್ವಾಗತಿಸಿದರು. ಜುನಿಪೇಟ ಶಾಖಾ ವ್ಯವಸ್ಥಾಪಕ ರವಿ ಶೆಸಿಲ್ ನಾಗ್ ವಂದಿಸಿದರು.


 

ಸುದ್ದಿ ಓದಿ