ಐಟಿ ದಾಳಿ, ಗೂಢಚರ್ಯೆ ವಿವಾದ, ಗದ್ದಲ ರಾಜ್ಯಸಭೆ ಕಲಾಪ ಮುಂದೂಡಿಕೆ
ನವದೆಹಲಿ, ಜುಲೈ 22 ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ, ಫೆಗಾಸಸ್ ಗೂಢಚರ್ಯೆ ವಿವಾದ ಹಾಗೂ ಪತ್ರಿಕೆಯೊಂದರ ಗುಂಪಿನ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ನಡೆಸಿರುವ ದಾಳಿ ವಿಷಯ ಪ್ರತಿಪಕ್ಷಗಳ ಸದಸ್ಯರು ಪ್ರಸ್ತಾಪಿಸಿದ್ದರಿಂದ ಉಂಟಾದ ಗದ್ದಲ, ಕೋಲಾಹಲ ಹಿನ್ನಲೆಯಲ್ಲಿ ಗುರುವಾರ ರಾಜ್ಯಸಭಾ ಕಲಾಪವನ್ನು ಮೊದಲು ಅಪರಾಹ್ನದ ವರೆಗೆ ಮುಂದೂಲಾಯಿತು.
ಬೆಳಗ್ಗೆ ರಾಜ್ಯಸಭೆ ಸಮಾವೇಶಗೊಳ್ಳುತ್ತಿದ್ದಂತೆಯೇ ಗೂಢಚರ್ಯೆ ವಿವಾದ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿದ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಅಕಾಲಿದಳ ಹಾಗೂ ಇನ್ನತರ ಪಕ್ಷಗಳ ಸದಸ್ಯರು ಚರ್ಚೆಗೆ ಆವಕಾಶ ನೀಡಬೇಕೆಂದು ಆಗ್ರಹಿಸಿದರು.
ಇದಕ್ಕೂ ಮುನ್ನ ಗದ್ದಲದ ನಡುವೆ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಏನೋ ಹೇಳಲು ಯತ್ನಿಸಿದರು ಆದರೆ ಗದ್ದಲದ ಕಾರಣ ಕೇಳಿಸಲಿಲ್ಲ. ಸದಸ್ಯರು ಫಲಕಗಳನ್ನು ಪ್ರದರ್ಶಿಸಿದರು. ತಕ್ಷಣವೇ ಸದನದ ಮಧ್ಯೆ ಬಂದ ಪ್ರತಿಪಕ್ಷಗಳ ಸದಸ್ಯರು ಘೋಷಣೆ ಕೂಗಲು ಆರಂಭಿಸಿದರು.
ಈ ಹಂತದಲ್ಲಿ ಸಭಾಧ್ಯಕ್ಷರು ಮಧ್ಯ ಪ್ರವೇಶಿಸಿ, ಸದಸ್ಯರು ಪ್ರಸ್ತಾಪಿಸಿರುವ ವಿಷಯಗಳ ಬಗ್ಗೆ ನೋಟೀಸ್ ನೀಡುವಂತೆ ಸೂಚಿಸಿ, ತಮ್ಮ ಸ್ಥಾನಗಳಿಗೆ ತೆರಳುವಂತೆ ಮನವಿ ಮಾಡಿದರು. ದಯಮಾಡಿ ನಿಮ್ಮ ಸ್ಥಾನಗಳಿಗೆ ತೆರಳಿ ಸಂಸದೀಯ ಸಂಪ್ರದಾಯ ಪಾಲಿಸಿ, ನೀವು ಪ್ರಸ್ತಾಪಿಸಿರುವ ಅಂಶಗಳ ಬಗ್ಗೆ ತಮಗೆ ನೋಟೀಸ್ ಕಳುಹಿಸಿ, ಪರಿಶೀಲಿಸಿ ಸೂಕ್ತವಾಗಿದ್ದರೆ ಚರ್ಚೆಗೆ ಅವಕಾಶ ಕಲ್ಪಿಸುವೆ ಎಂದು ಹೇಳಿದರು. ಆದರೆ ಪ್ರತಿಪಕ್ಷಗಳ ಸದಸ್ಯರ ವರ್ತನೆಗೆ ಬೇಸರ ವ್ಯಕ್ತಪಡಿಸಿದರು.
ಪದೇ ಪದೇ ತಾವು ಮಾಡಿಕೊಂಡ ಮನವಿಯನ್ನು ಪ್ರತಿ ಪಕ್ಷಗಳ ಸದಸ್ಯರು ಕಿವಿಮೇಲೆ ಹಾಕಿಕೊಳ್ಳದ ಕಾರಣ ಸಭಾಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಕಲಾಪದಲ್ಲಿ ಪಾಲ್ಗೊಳ್ಳಲು ಸದಸ್ಯರಿಗೆ ಆಸಕ್ತಿ ಇಲ್ಲ ಎಂದು ಹೇಳಿ, ಕೆಲವು ಸದಸ್ಯರು ಕಲಾಪ ಅಡ್ಡಿ ಪಡಿಸಿದ ಕಾರಣ ಅಪರಾಹ್ನ 12 ಗಂಟೆಯವರೆಗೆ ಮುಂದೂಡಿರುವುದಾಗಿ ಘೋಷಿಸಿದರು.