ಹಾಕಿ: ಅರ್ಜೆಂಟೀನಾ ಮಣಿಸಿದ ಭಾರತದ ಅಬ್ಬರ
ಟೋಕಿಯೊ, ಜು.29 ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡದ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ ಭಾರತ ಪುರುಷರ ಹಾಕಿ ತಂಡ ಇಲ್ಲಿ ನಡೆದ ಒಲಿಂಪಿಕ್ಸ್ ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ 3-1 ರಿಂದ ಜಯ ಸಾಧಿಸಿದೆ.
ಟೂರ್ನಿಯಲ್ಲಿ ಸೊಗಸಾದ ಪ್ರದರ್ಶನ ನೀಡಿದ ಮನ್ ಪ್ರೀತ್ ಸಿಂಗ್ ಪಡೆ ಮೂರನೇ ಗೆಲುವಿನ ನಗೆ ಬೀರಿತು. ಭಾರತದ ಪರ ವರುಣ್ ಕುಮಾರ್ (43ನೇ ನಿಮಿಷ), ಪ್ರಸಾದ್ ವಿವೇಕ್ ಸಾಗರ್ (58ನೇ ನಿಮಿಷ), ಹರ್ಮನ್ ಪ್ರೀತ್ ಸಿಂಗ್ (59ನೇ ನಿಮಿಷ) ಗೋಲು ಬಾರಿಸಿ ಮಿಂಚಿದರು. ಅರ್ಜೆಂಟೀನಾ ಪರ ಕ್ಯಾಸೆಲ್ಲಾ ಸ್ಕೂತ್ ಮೈಕೊ (48ನೇ ನಿಮಿಷ) ಗೋಲು ಸಿಡಿಸಿದರು.
ಭಾರತಕ್ಕೆ ಒಟ್ಟು ಎಂಟು ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತು. ಇದರಲ್ಲಿ ಭಾರತ ಎರಡು ಗೋಲು ಸಿಡಿಸಿತು. ಅರ್ಜೆಂಟೀನಾ ತಂಡಕ್ಕೂ ಎರಡು ಪೆನಾಲ್ಟಿ ಅವಕಾಶ ಸಿಕ್ಕಿದ್ದು, ಒಂದು ಗೋಲು ದಾಖಲಿಸಿತು.
ಆರಂಭದಿಂದಲೂ ಉಭಯ ತಂಡಗಳು ಸೊಗಸಾದ ಆಟಕ್ಕೆ ಮಣೆ ಹಾಕಿದವು. ಮೊದಲಾವಧಿಯಲ್ಲಿ ಗೋಲು ದಾಖಲಿಸಿ ಅಂತರವನ್ನು ವೃದ್ಧಿಸುವ ಯೋಜನೆ ಎರಡೂ ತಂಡಗಳದ್ದಾಗಿತ್ತು. ಆದರೆ ಈ ಅವಧಿಯಲ್ಲಿ ರಕ್ಷಣಾ ಆಟಗಾರರು ಮತ್ತು ಗೋಲ್ ಕೀಪರ್ ಅವರ ಉತ್ತಮ ಪ್ರದರ್ಶನದ ಬಲದಿಂದ ಗೋಲು ದಾಖಲಾಗಲಿಲ್ಲ.
ಎರಡನೇ ಅವಧಿಯಲ್ಲೂ ಭಾರತ, ಅರ್ಜೆಂಟೀನಾ ತಂಡಗಳು ಗೋಲು ಬಾರಿಸುವ ಅವಕಾಶ ಕೈಗೂಡಲಿಲ್ಲ.
ಮೂರನೇ ಅವಧಿಯಲ್ಲಿ ಭಾರತ ತಂಡ ಆಕ್ರಮಣಕಾರಿ ಆಟಕ್ಕೆ ಮಣೆ ಹಾಕಿ ಗೋಲು ಸಿಡಿಸಿ, ಪಂದ್ಯದಲ್ಲಿ ಮುನ್ನಡೆ ಸಾಧಿಸುವ ಕನಸು ಆರಂಭದಲ್ಲಿ ಫಲಿಸಲಿಲ್ಲ. ಆದರೆ ಸತತ ಪ್ರಯತ್ನದ ಫಲವಾಗಿ ಭಾರತ ಈ ಅವಧಿಯ ಕೊನೆಯ ಕ್ಷಣದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ವರುಣ್ ಕುಮಾರ್ ಗೋಲು ಸಿಡಿಸಿ ಆರ್ಭಟಿಸಿದರು.
ಕೊನೆಯ ಅವಧಿಯ ಆರಂಭದಲ್ಲಿ ಅರ್ಜೆಂಟೀನಾ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ಸಿಡಿಸಿ, ಅಂತರವನ್ನು ಸಮನಾಗಿಸಿತು.
ಭಾರೀ ರೋಚಕತೆ ಹುಟ್ಟಿಸಿದ್ದ ಪಂದ್ಯದಲ್ಲಿ ಕೊನೆಯ ವರೆಗೂ ಸ್ಥಿರ ಪ್ರದರ್ಶನ ನೀಡಿದ ಭಾರತ, ಅಂತಿಮ ಕ್ಷಣದಲ್ಲಿ ಎರಡು ಗೋಲು ಬಾರಿಸಿ ಜಯವನ್ನು ಖಚಿತ ಪಡಿಸಿತು. 58ನೇ ನಿಮಿಷದಲ್ಲಿ ವಿವೇಕ್ ಸಾಗರ್ ಪ್ರಸಾದ್ ಗೋಲು ಸಿಡಿಸಿ ಒಲಿಂಪಿಕ್ಸ್ ನಲ್ಲಿ ಮೊದಲ ಗೋಲಿನ ನಗೆ ಬೀರಿದರು.