ನೈಸರ್ಗಿಕ ಕೃಷಿಯಿಂದ ಹೆಚ್ಚಿನ ಆದಾಯ; ಮಾಸ್ತಿಹೊಳಿ
ಧಾರವಾಡ 25: ನೈಸರ್ಗಿಕ ಕೃಷಿಯ ಮಹತ್ವ ಹಾಗೂ ನೈಸರ್ಗಿಕ ಕೃಷಿಯಿಂದ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಿ, ಕಡಿಮೆ ವೆಚ್ಚದಲ್ಲಿ ಬೆಳೆಯನ್ನು ನೈಸರ್ಗಿಕವಾಗಿ ಬೆಳೆದು ಹೆಚ್ಚಿನ ಆದಾಯ ಪಡೆಯಬಹುದು ಎಂದು ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಯೋಜನೆ ಮುಖ್ಯಸ್ಥ ಡಾ.ಆನಂದ.ಬ.ಮಾಸ್ತಿಹೊಳಿ ತಿಳಿಸಿದರು.
ಬಾಗಲಕೋಟ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ "ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಯೋಜನೆ ವಲಯ-8(ತೋಟಗಾರಿಕೆ) ಅಡಿಯಲ್ಲಿ ಜೂನ್ 21ರಂದು ಸುತಗಟ್ಟಿ ಗ್ರಾಮದ ಅಭಯ್ ಮುತಾಲಿಕ್ ದೇಸಾಯಿಯವರ ತೋಟದಲ್ಲಿ ಬೆಳಗಾವಿ ಹಾಗೂ ಬೈಲಹೊಂಗಲ ತಾಲೂಕುಗಳ ರೈತರಿಗೆ "ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಬಗ್ಗೆ ಹಂಗಾಮು ಪೂರ್ವ ಕಾರ್ಯಾಗಾರ ಹಾಗೂ ಅಧ್ಯಯನ ಪ್ರವಾಸ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಕೃಷಿ ಪಂಡಿತರೆಂದೇ ಖ್ಯಾತನಾಮರಾದ ಪ್ರಗತಿಪರ ರೈತ ಅಭಯ್ ಮುತಾಲಿಕ್ ದೇಸಾಯಿ ಅವರು ಮಾತನಾಡಿ, ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯಲ್ಲಿನ ವೈವಿಧ್ಯತೆ, ಬಹುಬೆಳೆ ಬೇಸಾಯ ಪದ್ದತಿ ಮತ್ತು ನೈಸರ್ಗಿಕವಾಗಿ ಗೊಬ್ಬರ ತಯಾರಿಸುವ ಬಗ್ಗೆ ಹಾಗೂ ನೈಸರ್ಗಿಕ ಕೃಷಿಯಿಂದ ಬೆಳೆದ ಉತ್ಪನ್ನಗಳ ಮಾರುಕಟ್ಟೆಗೆ ಇರುವ ಬೇಡಿಕೆಯ ಬಗ್ಗೆ ವಿವರಿಸಿದರು.
ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಯೋಜನೆಯ ಸಂಶೋಧನಾ ಸಹಾಯಕ ಡಾ.ಶ್ರೀದೇವಿ, ರವಿಕಿರಣ ಕನಬರ್ಗಿಯವರು "ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯ ಆಧಾರ ಸ್ತಂಭಗಳಾದ ಬೀಜಾಮೃತ, ಜೀವಾಮೃತಗಳನ್ನು ತಯಾರಿಸುವ ಬಗ್ಗೆ ಪ್ರಾತ್ಯಕ್ಷತೆಯನ್ನು ನೀಡಿದರು.
ಡಾ. ಅಂಜನ್ಕುಮಾರ ನಾಯಕ್ ಅವರು ರೈತರಿಗೆ ಕೀಟಗಳ ನಿರ್ವಹಣೆಗೆ ಸಂಬಂಧಿಸಿದಂತೆ ನೀಮಾಸ್ತ್ರ, ಅಗ್ನಿಯಾಸ್ತ್ರ ಮತ್ತು ಬ್ರಹ್ಮಾಸ್ತ್ರಗಳ ಬಗ್ಗೆ ವಿವರಿಸಿದರು. ಉಮ್ಮೆಸಲ್ಮಾ ಸನದಿಯವರು ಮಣ್ಣು ಪರೀಕ್ಷೆಯ ಬಗ್ಗೆ ತಿಳಿಸಿಕೊಟ್ಟರು. ಡಾ. ಶಿವಬಸು ಖಾನಗೌಡರ ಅವರು ಮಣ್ಣಿನಲ್ಲಿರುವ ಸೂಕ್ಷ್ಮಾಣುಜೀವಿಗಳ ಬಗ್ಗೆ ಮಾಹಿತಿ ನೀಡಿದರು.
ಬೆಳಗಾವಿಯ ಕೃಷಿ ಅಧಿಕಾರಿಯಾದ ಅರುಣ ಕಾಪ್ಸಿ, ಬೈಲಹೊಂಗಲ ಹಾಗೂ ಬೆಳಗಾವಿ ತಾಲೂಕಿನ ಸಮುದಾಯ ಸಹಾಯಕರು ಮತ್ತು ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಹಾಗೂ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಯೋಜನೆಯ ಸಂಶೋಧನಾ ಸಹಾಯಕರು ಪಾಲ್ಗೊಂಡಿದ್ದರು.
ಸುಮಾರು 90 ಜನ ರೈತರು ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಬಗ್ಗೆ ಮಾಹಿತಿ ಪಡೆದು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಡಾ.ಶ್ರೀದೇವಿ. ರವಿಕಿರಣ ಕನಬರ್ಗಿಯವರು ನಿರೂಪಿಸಿ, ವಂದಿಸಿದರು.