ಶಾಲೆಯಲ್ಲಿ ಭಕ್ತಿ-ಭಾವದಿಂದ ಅರ್ಥಪೂರ್ಣವಾಗಿ ಆಚರಿಸಲ್ಪಟ್ಟ ಗುರು ಪೂರ್ಣಿಮೆ : ಹೆತ್ತವರೇ ಮೊದಲ ಗುರು ಎಂದು ಸಾರಿದ ಮಕ್ಕಳು
ಧಾರವಾಡ 29: ನಮ್ಮ ಶಾಲೆಯಲ್ಲಿ ಇತ್ತೀಚೆಗೆ ’ಗುರು ಪೂರ್ಣಿಮೆ’ಯನ್ನು ಅತ್ಯಂತ ಸಡಗರ, ಭಕ್ತಿ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಯಿತು. "ಮಾತಾ ಪಿತಾ ಗುರು ದೈವಮ್" ಎಂಬ ನಾಣ್ನುಡಿಯಂತೆ, ತಮ್ಮ ಜೀವನದಲ್ಲಿ ಅಪಾರ ತ್ಯಾಗ ಮಾಡಿದ ಪೋಷಕರೇ ನಮ್ಮ ಪಾಲಿಗೆ ಮೊಟ್ಟಮೊದಲ ಗುರುಗಳು ಎಂಬುದನ್ನು ಸ್ಮರಿಸುತ್ತಾ, ಮಕ್ಕಳು ತಮ್ಮ ಪಾಲಕರಿಗೆ ವಿಶೇಷವಾದ ’ಪಾದ ಪೂಜೆ’ ನೆರವೇರಿಸುವ ಮೂಲಕ ಭಾವನಾತ್ಮಕವಾಗಿ ಗೌರವ ಸಮರ್ಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಖ್ಯಾತ ಸಂಸ್ಕೃತ ವಿದ್ವಾನ್ ಹಾಗೂ ಉಪನ್ಯಾಸಕರಾದ ಶ್ರೀ ಭೀಮಸೇನಾಚಾರ್ಯ ಮಳಗಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಗುರುಗಳು ಮತ್ತು ಮಾತಾಪಿತೃಗಳ ಮಹತ್ವದ ಕುರಿತು ಮನವರಿಕೆ ಮಾಡಿಕೊಟ್ಟರು.
‘ತಾಯಿಯೇ ಮೊದಲ ಗುರು, ಮನೆಯೇ ಮೊದಲ ಪಾಠಶಾಲೆ’ ಎಂಬ ನಾಣ್ನುಡಿ ನಮ್ಮ ಸಂಸ್ಕೃತಿಯ ಜೀವಾಳವಾಗಿದೆ. ಮಗು ತಾಯಿಯ ಗರ್ಭದಲ್ಲಿರುವಾಗಲೇ ಬೋಧನೆ ಮತ್ತು ಪಾಲನೆ ಪ್ರಾರಂಭವಾಗುತ್ತದೆ. ‘ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಃ’ ಎಂಬ ಶ್ಲೋಕವೇ ತಿಳಿಸುವಂತೆ, ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅತ್ಯುನ್ನತ ಮತ್ತು ಪವಿತ್ರವಾದ ಸ್ಥಾನವಿದೆ. ತಾಯಿ ಮಗುವಿಗೆ ಜನ್ಮ ನೀಡಿದರೆ, ಗುರುವು ಆ ಮಗುವಿಗೆ ಜ್ಞಾನದ ಬೆಳಕನ್ನು ನೀಡಿ ಪುನರ್ಜನ್ಮ ನೀಡುತ್ತಾರೆ ಎಂಬುದನ್ನು ತಿಳಿಸಿದರು.
ಶಾಲೆಯ ಪ್ರಾಂಶುಪಾಲರಾದ ಡಯಾನಾ ಜೋಗಿನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಾಲೆಯ ಸಹಸಂಯೋಜಕರಾದ ನಿರ್ಮಲಾ ಪಾಟೀಲ್, ಕಮಲಾಕ್ಷಿ ಸಣ್ಣಕ್ಕಿ, ಪ್ರಿಯಾಂಕಾ ನಾಯಕ್ ಹಾಗೂ ಸಮಸ್ತ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದರು.
ಕಾರ್ಯಕ್ರಮದ ನಿರೂಪಣೆ ಮತ್ತು ವಂದನಾರೆ್ಣಯನ್ನು ಕನ್ನಡ ಶಿಕ್ಷಕಿ ಭಾರತಿ ನೀರಲಕಟ್ಟಿ ಅವರು ಅತ್ಯಂತ ಅಚ್ಚುಕಟ್ಟಾಗಿ ನೆರವೇರಿಸಿಕೊಟ್ಟರು. ಅಂತಿಮವಾಗಿ ಪೋಷಕರು ಹಾಗೂ ಗುರುಗಳಿಗೆ ಗೌರವ ಸಲ್ಲಿಸುವುದರೊಂದಿಗೆ ಕಾರ್ಯಕ್ರಮವು ಕಳೆಗಟ್ಟಿತು.