ರಾಜ್ಯದ ಕನ್ನಡೇತರರಲ್ಲಿಯೂ ಕನ್ನಡ ಭಾಷೆಯ ಅಭಿಮಾನ ಬೆಳೆಸಿ: ಕುಂದಗೋಳ
ಮಹಾಲಿಂಗಪುರ 28: ರಾಜ್ಯದ ಕನ್ನಡೇತರರಲ್ಲಿಯೂ ಕನ್ನಡ ಭಾಷೆಯ ಅಭಿಮಾನ ಬೆಳೆಸಿ ಎಂದು ಕೆ.ಎಲ್.ಇ ಪಾಲಿಟೆಕ್ನಿಕ್ ಪ್ರಾಚಾರ್ಯ ಎಸ್.ಐ ಕುಂದಗೋಳ ಅವರು ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಗೆ ಕರೆಕೊಟ್ಟರು.
ಅಕ್ಟೋಬರ್ 28ರಂದು ಸ್ಥಳೀಯ ಕೆ.ಎಲ್.ಇ ಸಂಸ್ಥೆಯ ಡಿಪ್ಲೋಮಾ ಕಾಲೇಜಲ್ಲಿ 66 ನೇ ರಾಜ್ಯೋತ್ಸವ ಅಂಗವಾಗಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಆದೇಶದಂತೆ 'ಕನ್ನಡಕ್ಕಾಗಿ ನಾವು' ಅಭಿಯಾನದ ಅಡಿಯಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ಸಾಮೂಹಿಕ ಕನ್ನಡ ಗೀತ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ಉಳಿಸಿ ಬೆಳಸುವ ಸಂಕಲ್ಪ ಸಂದೇಶ ಭೋದಿಸಿ, ಕನ್ನಡ ನೆಲದಲ್ಲಿ ವಾಸಿಸುವ ನಾವೆಲ್ಲ ಕನ್ನಡ ನಾಡಿಗೆ ಚಿರಋಣಿಯಾಗಿದ್ದು, ಕನ್ನಡ ಪ್ರದೇಶದ ನೆಲ-ಜಲ, ಸಂಸ್ಕ್ರತಿ, ಪರಂಪರೆ ಮತ್ತು ಕನ್ನಡ ಭಾಷೆ ಉಳಿಸಿ, ಅಭಿವೃದ್ಧಿಗೊಳಿಸುವಲ್ಲಿಯೂ ಸರ್ವರ ಸಹಕಾರ ಅಷ್ಟೇ ಅಗತ್ಯವಾಗಿದೆ ಎಂದರು.
ಇದರ ನಿಮಿತ್ತವಾಗಿ ನಿಸಾರ್ ಅಹ್ಮದ್ ಅವರ ಜೋಗದ ಸಿರಿ ಬೆಳಕಿನಲ್ಲಿ ಮತ್ತು ಹಂಸಲೇಖ ಅವರ ಹುಟ್ಟಿದರೆ ಕನ್ನಡನಾಡಲಿ ಹುಟ್ಟಬೇಕು ಎಂಬ ಗೀತೆಗಳನ್ನು ವಿದ್ಯಾರ್ಥಿಗಳು ಹಾಡಿದರೆ, ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಮವಾ ಗೀತೆಯನ್ನು ಪ್ರಾಚಾರ್ಯರ ಜೊತೆಗೆ ಎಲ್ಲ ಸಿಬ್ಬಂದಿ ಹಾಡುವ ಮೂಲಕ ತಾಂತ್ರಿಕ ಉಪನ್ಯಾಸಕರು ಕನ್ನಡದ ಬಗ್ಗೆ ಇರುವ ಗೌರವವನ್ನು ತೋರಿದರು.
ಉಪನ್ಯಾಸಕಿ ಪ್ರಿಯಾ ಸೋನಾರ ಕಾರ್ಯಕ್ರಮ ನಡೆಸಿಕೊಟ್ಟರು, ಕಾರ್ಯಕ್ರಮ ಕೊನೆಗೆ ನಾಡಗೀತೆ ಹಾಡಲಾಯಿತು. ಈ ಸಂದರ್ಭದಲ್ಲಿ ಸವಿತಾ ಗೊಂದಿ, ಮಲ್ಲಪ್ಪ ಗರಗದ, ಸವಿತಾ ಬೀಳಗಿ, ನಿರ್ಮಲಾ ಫಕೀರಪುರ, ಪ್ರಿಯಾಂಕಾ ನಿಶಾಂದಾರ, ಮಹಾದೇವಿ ಅಂಬಿ ಮತ್ತು ಕಾಲೇಜಿನ ಎಲ್ಲ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.