ಪೋಲಿಸ್ ಠಾಣೆಯಲ್ಲಿ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕುಂದುಕೊರತೆ ಸಭೆ
ಮಹಾಲಿಂಗಪುರ 26: ಪೊಲೀಸ್ ಇಲಾಖೆ ಮತ್ತು ಇನ್ನಿತರೆ ಇಲಾಖೆಗಳ ಸಹಯೋಗದೊಂದಿಗೆ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮೂಲಭೂತ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ತಾಲೂಕಾ ಮಟ್ಟದಲ್ಲಿಯೇ ಆಡಳಿತದಿಂದ ಪರಿಹರಿಸಲಾಗುವುದು ಎಂದು ರಬಕವಿ ಬನಹಟ್ಟಿ ತಹಶೀಲ್ದಾರ್ ಸಂಜಯ್ ಇಂಗಳೆ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ರಬಕವಿ-ಬನಹಟ್ಟಿ ವೃತ್ತ ವತಿಯಿಂದ ಶುಕ್ರವಾರ ಸಂಜೆ ಹಮ್ಮಿಕೊಂಡ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು ಈ ವರ್ಗಗಳಲ್ಲಿ ಕೆಎಎಸ್ ಮತ್ತು ಐಎಎಸ್ ಪರೀಕ್ಷೆ ಬರೆಯಲಿಚ್ಚಿಸುವ ಅಭ್ಯರ್ಥಿಗಳಿಗೆ ಉಚಿತ ತರಬೇತಿ ನೀಡುವ ಸೌಲಭ್ಯವೂ ಇದೆ, ಕಾರಣ ಸಮುದಾಯಗಳು ಇದರ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಜಮಖಂಡಿ ಡಿವೈಎಸ್ಪಿ ಎಂ.ಪಾಂಡುರಂಗಯ್ಯ ಮಾತನಾಡಿ, ಇಂತಹ ಸಭೆಗಳನ್ನು ಆಯೋಜಿಸಲು ಸಾರ್ವಜನಿಕರು ಮತ್ತು ಅಧಿಕಾರಿಗಳ ಮಧ್ಯೆ ಸಮನ್ವಯದ ಕೊರತೆ ಕಾಡುತ್ತಿದ್ದು ಸಭೆಗಳಿಂದ ವಿನಾಕಾರಣ ಸಮಸ್ಯೆಗಳೆ ಉದ್ಭವಿಸುತ್ತವೆ ಎಂದು ಅಧಿಕಾರಿಗಳು ಹಿಂಜರಿಯುತ್ತಿದ್ದಾರೆ. ಹಾಗೆ ಮಾಡದೆ ಇಂತಹ ಸಭೆಗಳನ್ನು ನಡೆಸಿ ಅವರಲ್ಲಿರುವ ಸಮಸ್ಯೆಗಳನ್ನು ಆಲಿಸಿದಾಗ ನಾವು ಸ್ಥಳೀಯ ಮಟ್ಟದಲ್ಲಿಯೇ ಅವುಗಳಿಗೆ ಪರಿಹಾರ ನೀಡಬಹುದಾಗಿದೆ. ಈ ರೀತಿಯ ಕ್ರಮಗಳು ಮಾದರಿಯಾಗಿದ್ದು ಬರುವ ದಿನಗಳಲ್ಲಿ ಹೆಚ್ಚೆಚ್ಚು ಸಭೆಗಳನ್ನು ಮಾಡುವ ಮೂಲಕ ಸಮಾಜ ಸುಭಿಕ್ಷವಾಗಲು ನಾವೆಲ್ಲರೂ ನೆರವಾಗೋಣ ಎಂದರು.
ಜಮಖಂಡಿ ಉಪವಿಭಾಗದ ಜಮಖಂಡಿ, ಬನಹಟ್ಟಿ, ಮುಧೋಳ, ಬೀಳಗಿ ವೃತ್ತದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕಾಯ್ದೆ ಅಡಿ ಕಳೆದ ಮೂರು ವರ್ಷಗಳಲ್ಲಿ 40 ಪ್ರಕರಣ ದಾಖಲಾಗಿವೆ. ಈ ಪೈಕಿ 25 ಪ್ರಕರಣಗಳಿಗೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿ, ಒಟ್ಟು 23 ಪ್ರಕರಣಗಳಿಗೆ ಪರಿಹಾರ ದೊರೆಕಿದೆ ಎಂದರು.
ಮಹಾಲಿಂಗಪುರದ ಕೆಂಗೇರಿಮಡ್ಡಿ ಹಾಗೂ ಕಲ್ಪಡಗಲ್ಲಿಯಲ್ಲಿ ಹಕ್ಕು ಪತ್ರ ನೀಡದಿರುವ ಜನರಿಗೆ ಅಕ್ರಮ ಸಕ್ರಮದಡಿ ಹಕ್ಕು ಪತ್ರಗಳನ್ನು ನೀಡಬೇಕು. ಸೈದಾಪುರ ಕೆನಾಲ್ದಲ್ಲಿ ಸಾರ್ವಜನಿಕರು ಪ್ಲಾಸ್ಟಿಕ್ ಮತ್ತು ಗಾಜಿನ ಬಾಟಲ್ ಗಳು, ಕಸ ಹಾಗೂ ತ್ಯಾಜ್ಯವನ್ನು ಹಾಕುತ್ತಿದ್ದು ಗ್ರಾಮ ಪಂಚಾಯ್ತಿಯವರಿಗೆ ಹಾಕದಂತೆ ಕ್ರಮಕೈಗೊಳ್ಳಲು ತಿಳಿಸಬೇಕು. ಮಹಾಲಿಂಗಪುರದ ಅಂಬೇಡ್ಕರ್ ವೃತ್ತ ಪ್ರದೇಶದಲ್ಲಿ ಸಿಸಿ ಟಿವಿ ಅಳವಡಿಸಲು ಕೋರಿ ಸಭೆಯಲ್ಲಿ ಅಧಿಕಾರಿಗಳನ್ನು ಆಗ್ರಹಿಸಲಾಯಿತು.
ವೃತ್ತ ನೀರೀಕ್ಷಕ ಜೆ.ಕರುಣೇಶಗೌಡ ಮಾತನಾಡಿದರು. ಪಟ್ಟಣದ ಠಾಣಾಧಿಕಾರಿ ವಿಜಯ ಕಾಂಬಳೆ, ಬನಹಟ್ಟಿ ಪಿಎಸ್ಐ ಸುರೇಶ ಮಂಟೂರ, ತೇರದಾಳ ಪಿಎಸ್ಐ ರಾಜು ಬೀಳಗಿ, ಮುಧೋಳ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಂ.ಕೆ.ಕೋರಡ್ಡಿ, ಜಮಖಂಡಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿ.ಎಸ್.ಗಡ್ಡದೇವರಮಠ, ಪುರಸಭೆ ಸಮುದಾಯ ಸಂಘಟಕ ಚಿದಾನಂದ ಮಠಪತಿ, ಹೆಸ್ಕಾಂ ಶಾಖಾಧಿಕಾರಿ ಆರ್.ಆರ್.ಬಾಗೋಜಿ, ಹೆಸ್ಕಾಂ ಗ್ರಾಮೀಣ ಶಾಖಾಧಿಕಾರಿ ಆರ್.ಎಸ್.ಸರಿಕರ, ಪ್ರೋಬೇಷನರಿ ಪಿಎಸ್ಐ ಬಸವರಾಜ ಯದ್ದಲಗುಡ ಮತ್ತು ಪಟ್ಟಣದ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು.